ಬೆಂಗಳೂರು: ಧರ್ಮ, ಜಾತಿಗಳನ್ನು ಎತ್ತಿ ಕಟ್ಟಿ, ಸಮಾಜವನ್ನು ಒಡೆಯುವವರ ಜೊತೆ ಕೈ ಜೋಡಿಸಬೇಡಿ, ಸಮಾಜ ಘಾತುಕ ಶಕ್ತಿಗಳನ್ನು ದೂರ ಇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಲ್ಲಿ ಮನವಿ ಮಾಡಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ "ದಾಸಶ್ರೇಷ್ಠ ಕನಕದಾಸ" ಜಯಂತಿಯನ್ನು ಉದ್ಘಾಟಿಸಿ, ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ, ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಯಾವುದೇ ಧರ್ಮವೂ ಮತ್ತೊಬ್ಬರನ್ನು, ಮತ್ತೊಂದು ಧರ್ಮವನ್ನು ದ್ವೇಷಿಸು ಎಂದು ಹೇಳಿಲ್ಲ. ಸಹಿಷ್ಣುತೆ, ಸಹಬಾಳ್ವೆ ಎರಡೂ ಮುಖ್ಯ. ಇದನ್ನು ಮನುಷ್ಯ ಕಲಿಯಬೇಕು. ಸಂವಿಧಾನದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಪ್ರೀತಿ, ಸಹಬಾಳ್ವೆ, ಮನುಷ್ಯತ್ವ ಸಾರುವವರ ಮೇಲೆ ನಂಬಿಕೆ ಇಡಿ ಎಂದರು.
ಸಂವಿಧಾನದ ಆಶಯಗಳ ರೀತಿಯಲ್ಲಿ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಎಲ್ಲ ಸರ್ಕಾರಗಳ ಮೇಲಿದೆ. ಕನಕದಾಸರ ವಿಚಾರ, ಆದರ್ಶಗಳನ್ನು ಮುಂದಿಟ್ಟುಕೊಂಡು ಸಂವಿಧಾನದ ಆಶಯಗಳನ್ನು ಈಡೇರಿಸಬೇಕಾಗಿರುವುದು ಸರ್ಕಾರದ ಹೊಣೆ. ಜಾತಿ ವ್ಯವಸ್ಥೆ ಹೋಗಲಾಡಿಸಬೇಕೆಂದು ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಈ ವ್ಯಕ್ತಿಗಳು ಇಡೀ ದೇಶಕ್ಕೆ ಸಲ್ಲುವವರು. ಇವರಿಗೆ ಜಾತಿ ಇಲ್ಲ ಎಂದು ಹೇಳಿದರು.
ಹಿಂದುಳಿದ ಜಾತಿಯಲ್ಲಿ ಜನಿಸಿದ ಅನೇಕ ಮಹನೀಯರು ಮಹತ್ ಕಾವ್ಯಗಳನ್ನು ರಚಿಸಿದ್ದಾರೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣ, ವ್ಯಾಸರು ಮಹಾಭಾರತ , ಕಾಳಿದಾಸರು ಶಾಕುಂತಲ ರಚನೆ , ಕನಕದಾಸರು ನಳ ಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿಸಾರದಂತಹ ಕಾವ್ಯ ರಚನೆ ಮಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದರು. ಇದೆಲ್ಲ ವಿದ್ಯೆಯ ಮಹಿಮೆ. ಆದ್ದರಿಂದಲೇ ಸಮಾಜದ ಪ್ರತಿಯೊಬ್ಬರು ಶಿಕ್ಷಣ ಪಡೆಯಲೇಬೇಕು, ವಿಚಾರವಂತರಾಗಲೇಬೇಕು ಎಂದು ತಿಳಿಸಿದರು.
ಕನಕದಾಸರು ಅಧಿಕಾರ, ಅಂತಸ್ತು ತ್ಯಾಗ ಮಾಡಿ ದಾಸಶ್ರೇಷ್ಠರಾದರು. ಸಮಾಜ ಸುಧಾರಣೆಯ ಹಲವು ಮಾರ್ಗಗಳನ್ನು ತೋರಿಸಿಕೊಟ್ಟರು. ಅವರ ಬೋಧನೆಗಳನ್ನು, ವಿಚಾರಧಾರೆಗಳನ್ನು ಪಾಲಿಸುವುದರಲ್ಲಿ ಜಯಂತಿ ಆಚರಣೆಯ ಸಾರ್ಥಕತೆ ಇದೆ. ಇಂತಹ ಎಲ್ಲ ಮಹಾನುಭಾವರ ಜಯಂತಿ ಆಚರಣೆಗಳನ್ನು ಸರ್ಕಾರ ಮಾಡುತ್ತಿರುವುದೂ ಕೂಡಾ ಅವರ ಆದರ್ಶಗಳನ್ನು ಪಾಲಿಸುವ ಉದ್ದೇಶದಿಂದ. ಇದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.