ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬೈಕ್-ಟ್ಯಾಕ್ಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ನವೆಂಬರ್ 6 ರಂದು ನಡೆದ ಘಟನೆಯ ಬಗ್ಗೆ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಆರೋಪಿ ವಿರುದ್ಧ ದೂರು ದಾಖಲಾಗಿತ್ತು.
ಪೊಲೀಸ್ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡವು ಮಹಿಳೆಯ ಪೋಸ್ಟ್ ಅನ್ನು ಗಮನಿಸಿ ವಿವರಗಳಿಗಾಗಿ ಆಕೆಯನ್ನು ಸಂಪರ್ಕಿಸಿತು. ಮರುದಿನ ಪ್ರಕರಣ ದಾಖಲಿಸಲಾಯಿತು ಮತ್ತು ತನಿಖೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.
'ಆರೋಪಿಯನ್ನು ಉಳ್ಳಾಲದ ಮುನಿಯಪ್ಪ ಲೇಔಟ್ ನಿವಾಸಿ ಲೋಕೇಶ್ (28) ಎಂದು ಗುರುತಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ನಡೆದಾಗ ಮಹಿಳೆ ಚರ್ಚ್ ಸ್ಟ್ರೀಟ್‌ನಿಂದ ತನ್ನ ಪೇಯಿಂಗ್ ಗೆಸ್ಟ್ (ಪಿಜಿ) ಹಾಸ್ಟೆಲ್‌ಗೆ ಹಿಂತಿರುಗುತ್ತಿದ್ದರು ಎಂದು ಅವರು ಹೇಳಿದರು.
ಆರೋಪಿ ಬಂಧನದ ಕುರಿತು ಪೋಸ್ಟ್ ಮಾಡಿರುವ ಸಂತ್ರಸ್ತೆ, ನಾನು ಇದನ್ನು ಯಾವುದೇ ಖ್ಯಾತಿಯನ್ನು ಗಳಿಸಲು ಮಾಡಲಿಲ್ಲ. ಯಾವುದೇ ಮಹಿಳೆ ಖ್ಯಾತಿಗಾಗಿ ತನ್ನ ವೃತ್ತಿಯನ್ನೇ ಮುಡಿಪಾಗಿಡುತ್ತಾಳೆ ಎಂದು ನಾನು ಭಾವಿಸುವುದಿಲ್ಲ. ಸಂಪೂರ್ಣ ಘಟನೆಯನ್ನು ರೆಕಾರ್ಡ್ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ, ಆತನ ಉದ್ದೇಶವೇನೆಂಬುದು ಮೊದಲಿಗೆ ನನಗೆ ತಿಳಿದಿರಲಿಲ್ಲ. ಗಾಡಿ ನಿಲ್ಲಿಸುವಂತೆ ಹೇಳಿದಾಗ ಆತ ನನ್ನ ಮಾತನ್ನು ಕೇಳಲಿಲ್ಲ. ನಾನೇನಾದರೂ ಹೆಚ್ಚಿನದನ್ನು ಮಾಡಿದ್ದರೆ, ಅದು ಅಪಘಾತಕ್ಕೆ ಕಾರಣವಾಗುತ್ತಿತ್ತು ಅಥವಾ ಆತ ನನಗೇನಾದರೂ ಅಪಾಯ ಮಾಡುತ್ತಿದ್ದ. ಈಗ ನನ್ನ ಬಳಿ ಸಾಕ್ಷಿ ಇಲ್ಲ ಎಂಬುದಕ್ಕೆ ನನ್ನನ್ನು ಯಾರೂ ನಂಬುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನನ್ನ ಬಳಿ ಯಾವುದೇ ಪುರಾವೆಗಳಿಲ್ಲದಿದ್ದರೆ ಪೊಲೀಸರು ಅಥವಾ ರಾಪಿಡೊ ತಂಡ ಕಾನೂನು ಕ್ರಮ ಕೈಗೊಳ್ಳುತ್ತದೆಯೇ? ನನಗೆ ಏನು ಸರಿ ಅನ್ನಿಸಿತೋ ಅದನ್ನೇ ನಾನು ಮಾಡಿದ್ದೇನೆ ಮತ್ತು ಅದಕ್ಕಾಗಿ ನನಗೆ ಯಾವುದೇ ವಿಷಾಧವಿಲ್ಲ. ನಾನು ಭಯದಿಂದ ಅತ್ತೆ ಹೊರತು ಖ್ಯಾತಿಗಾಗಿ ಅಲ್ಲ. ಆತ ಬಡವನೆಂಬ ಕಾರಣಕ್ಕಾಗಿ ನನ್ನನ್ನು ಅಸಭ್ಯವಾಗಿ ಮುಟ್ಟಿದ ಯಾರನ್ನೂ ನಾನು ಸುಮ್ಮನೆ ಬಿಡುವುದಿಲ್ಲ. ಆತ ಇಂದು ಮಾಡಿದ್ದು ನಾಳೆ ಮತ್ತೊಬ್ಬರಿಗೆ ಸಂಭವಿಸುವುದಿಲ್ಲವೇ?. ಆತನನ್ನು ಸಮರ್ಥಿಸಿಕೊಳ್ಳುವವರಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ. ಆತ ಮಾಡಿದ್ದು ಉದ್ದೇಶಪೂರ್ವಕವಾಗಿತ್ತು. ಅವರು ಸ್ಥಳೀಯರು ಅಲ್ಲ ಎನ್ನುವ ಒಂದೇ ಕಾರಣಕ್ಕೆ ಅವರ ವಿರುದ್ಧ ಆರೋಪ ಮಾಡುವ ಮುನ್ನ ಯೋಚಿಸಿ ಎಂದು ಬರೆದಿದ್ದಾರೆ.