ಮೈಸೂರು: ಮೈಸೂರಿನ ಸರಗೂರಿನಲ್ಲಿ ದನಗಳು ಮತ್ತು ಓರ್ವ ವ್ಯಕ್ತಿಯನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಮೈಸೂರಿನ ಸರಗೂರು ತಾಲ್ಲೂಕಿನ ಕಂದಲಿಕೆ ಹೋಬಳಿ ಹೊಸಕೋಟೆ ಗ್ರಾಮದ ಟ್ರೆಂಚ್ ಬಳಿ ಶನಿವಾರ ರಾತ್ರಿ ರಾತ್ರಿ 11ರಿಂದ 12 ವರ್ಷ ವಯಸ್ಸಿನ ಗಂಡು ಹುಲಿ ಸೆರೆಯಾಗಿದೆ. ಪ್ರಸ್ತುತ ಹುಲಿಯನ್ನು ಮೈಸೂರು ತಾಲ್ಲೂಕಿನ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಲಿ ಕಾರ್ಯಾಚರಣೆ ನಡೆಸುವಾಗ ಡ್ರೋನ್ ಕಾಮೆರಾದಲ್ಲಿ ಚಲನವಲನ ಪತ್ತೆಯಾಗಿತ್ತು. ಅದನ್ನು ಆಧರಿಸಿ ಸೆರೆ ಹಿಡಿಯಲಾಗಿದೆ. ಅದಕ್ಕೆ ಕತ್ತು ಮತ್ತು ಕಾಲಿನ ಭಾಗದಲ್ಲಿ ಗಾಯವಾಗಿದೆ ಎನ್ನಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಂಡಿಪುರ ಮತ್ತು ನಾಗರಹೊಳೆಯ ಅರಣ್ಯದಂಚಿನಲ್ಲಿ ಹುಲಿಗಳು ಮನುಷ್ಯರ ಮೇಲೆ ಮತ್ತು ಜಾನುವಾರಗಳ ಮೇಲೆ ದಾಳಿ ಮಾಡುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆಯ ಸಫಾರಿ ಸ್ಥಗಿತಗೊಳಿಸಿ, ಅಲ್ಲಿನ ಸಿಬ್ಬಂದಿಯನ್ನು ಹುಲಿ ಸರೆ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಬಂಡಿಪುರ ಮತ್ತು ನಾಗರಹೊಳೆಯ ವಿವಿಧ ವಲಯಗಳ ಅಧಿಕಾರಿಗಳ ಜೊತೆಗೆ ಇತರ ವಲಯಗಳ ಅಧಿಕಾರಿ ಮತ್ತು ಸಿಬ್ಬಂದಿಯೂ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಹುಲಿಯನ್ನು ಹಿಡಿದಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು?
ಸರಗೂರು ತಾಲೂಕಿನಲ್ಲಿ ಪದೇ ಪದೆ ಜನರ ಮೇಲೆ ದಾಳಿ ಮಾಡಿ ಜನ, ಜಾನುವಾರುಗಳ ಸಾವಿಗೆ ಕಾರಣವಾಗಿದ್ದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
'ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂವರ ಮೇಲೆ ದಾಳಿ ಮಾಡಿ, ಅವರ ಸಾವಿಗೆ ಕಾರಣವಾಗಿದ್ದ ಈ ಹುಲಿಯನ್ನು ಸೆರೆಹಿಡಿದಿರುವುದಾಗಿ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಲಿ ದಾಳಿಯಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಇದೀಗ ಸೆರೆ ಹಿಡಿದಿರುವ ಹುಲಿಯ ಡಿ.ಎನ್.ಎ. ಎರಡನ್ನೂ ಪರಿಶೀಲಿಸಿ, ಸೆರೆ ಹಿಡಿಯಲಾದ ಹುಲಿ ಹೆಡಿಯಾಲ, ಮೊಳೆಯೂರು, ನುಗು ಸುತ್ತಮುತ್ತ ಜನರ ಜೀವ ಹಾನಿ ಮಾಡಿದ ಹುಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
ಸೆರೆಹಿಡಿದ ಹುಲಿಗೆ ಸುಮಾರು 12-13 ವರ್ಷ ವಯಸ್ಸಾಗಿದ್ದು, ಹಲ್ಲುಗಳು ಬಲಹೀನವಾಗಿವೆ. ಹೀಗಾಗಿ ಅರಣ್ಯದಲ್ಲಿ ಸಸ್ಯಹಾರಿ ವನ್ಯಜೀವಿಗಳ ಬೇಟೆ ಆಡಲು ಅಶಕ್ತವಾಗಿದ್ದ ಈ ಗಂಡು ಹುಲಿ, ಪಕ್ಕದ ಗ್ರಾಮಗಳಿಗೆ ನುಗ್ಗಿ ಜನ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಈಶ್ವರ ಖಂಡ್ರೆ ವಿವರಿಸಿದ್ದಾರೆ.
ವನ್ಯಜೀವಿ ವಿಭಾಗದ ಎ.ಪಿ.ಸಿ.ಸಿ.ಎಫ್ ಮತ್ತು ಹುಲಿ ಯೋಜನೆಯ ನಿರ್ದೇಶಕರಿಗೆ ವಸತಿ ಪ್ರದೇಶಗಳ ಬಳಿ ಹುಲಿಗಳ ಸಂಚಾರ ಇರುವ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ಈ ಹುಲಿಯಲ್ಲದೆ ಬೇರೆ ಯಾವುದಾದರೂ ಹುಲಿಗಳು ಜನ, ಜಾನುವಾರಗಳ ಮೇಲೆ ದಾಳಿ ಮಾಡಿವೆಯೇ ಎಂಬ ಪರಿಶೀಲಿಸಿ ಕಾರ್ಯಾಚರಣೆ ನಡೆಸಲು ಸೂಚಿಸಿರುವುದಾಗಿಯೂ ಹೇಳಿದ್ದಾರೆ.