ಬೆಂಗಳೂರು: ಕೊಲೆ ಪ್ರಕರಣಗಳ ಸಂಬಂಧ ಸ್ಥಳ ಮಹಜರಿಗೆ ಕರೆದು ಕೊಂಡು ಹೋಗಿದ್ದ ವೇಳೆ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ರವಿಪ್ರಸಾದ್ ರೆಡ್ಡಿ (40) ಬಂಧಿತ ಆರೋಪಿ. ಈತ ನ.4ರಂದು ಕಾಚನಾಯಕನ ಹಳ್ಳಿ ನಿವಾಸಿ ಮಾದೇಶ್ ಮತ್ತು ನ.6ರಂದು ಬೊಮ್ಮಸಂದ್ರ ನಿವಾಸಿ ಬಾಲಪ್ಪ ಎಂಬವರನ್ನು ಹತ್ಯೆಗೈದು ರೂ.2 ಕೋಟಿ ಹಣ ಎಗರಿಸಿ ಪರಾರಿಯಾಗಿದ್ದ.
ಘಟನೆ ಬೆನ್ನಲ್ಲೇ ಬಾಲಪ್ಪ ಅವರ ಪುತ್ರ ದೂರು ದಾಖಲಿಸಿದ್ದ. ಬಳಿಕ ಪೊಲೀಸರು ತನಿಖಾ ತಂಡವನ್ನು ರಚಿಸಿ, ಆರೋಪಿಯನ್ನು ಪತ್ತೆ ಮಾಡಿತ್ತು. ಈ ನಡುವೆ ಅಪಹರಣದ ದಿನವೇ ರವಿಪ್ರಸಾದ್ ಬಾಲಪ್ಪನನ್ನು ಕೊಲೆ ಮಾಡಿ, ಮರುದಿನ ರಾತ್ರಿ ಹೊಸೂರು ಬಳಿಯ ಕಾಡಿನಲ್ಲಿ ಶವವನ್ನು ಎಸೆದಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.
ಬಳಿಕ ಡಿಸಿಪಿ (ಎಲೆಕ್ಟ್ರಾನಿಕ್ಸ್ ಸಿಟಿ) ಎಂ. ನಾರಾಯಣ ಅವರು ರವಿಪ್ರಸಾದ್'ನನ್ನು ಶನಿವಾರ ಮಧ್ಯಾಹ್ನ 3.30 ರ ಸುಮಾರಿಗೆ ಬಂಧಿಸಿದ್ದರು. ವಿಚಾರಣೆ ವೇಳೆ ಬಾಲಪ್ಪನನ್ನು ಹತ್ಯೆಗೈಯಲು ಬಳಸಿದ್ದ ಮಾರಕಾಸ್ತ್ರ ಗಳನ್ನು ಬೊಮ್ಮಸಂದ್ರದ ಸ್ಮಶಾನದ ಬಳಿಯ ನಿರ್ಜನ ಪ್ರದೇಶದಲ್ಲಿ ಬಿಸಾಡಿರುವುದಾಗಿ ಆರೋಪಿ ತಿಳಿಸಿದ್ದ. ಹೀಗಾಗಿ ಶನಿವಾರ ರಾತ್ರಿ ಆ ಸ್ಥಳಕ್ಕೆ ಕರೆದೊಯ್ಯಲಾಗಿತ್ತು.
ಈ ವೇಳೆ ನೀಲಗಿರಿ ತೋಪಿಗೆ ಪೊಲೀಸರನ್ನು ಕರೆದೊಯ್ದು ಆರೋಪಿ, ಅಲ್ಲಿದ್ದ ಶೆಡ್‌ನ ಪ್ಲೇವುಡ್ ಮರದ ಕೆಳಗೆ ಇರಿಸಿದ್ದ ಡ್ರಾಗರ್‌ನಿಂದ ಕಾನ್‌ಸ್ಟೇಬಲ್ ಅಶೋಕ್ ಮೇಲೆ ಹಲ್ಲೆ ಮಾಡಿದ್ದಾನೆ. ಅದನ್ನು ತಡೆಯಲು ಬಂದ ಪ್ರವೀಣ್ ಎಂಬ ಮತ್ತೊಬ್ಬ ಸಿಬ್ಬಂದಿಗೂ ಹಲ್ಲೆಗೆ ಯತ್ನಿಸಿದ್ದಾನೆ.
ಆಗ ಠಾಣಾಧಿಕಾರಿ ಸೋಮಶೇಖರ್, ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಕೋರಿದ್ದಾರೆ. ಆದರೂ ಆರೋಪಿ ಮತ್ತೊಮ್ಮೆಗೆ ಹಲ್ಲೆಗೆ ಮುಂದಾಗಿದ್ದ. ಆತ್ಮರಕ್ಷಣೆ ಹಾಗೂ ಸಿಬ್ಬಂದಿ ರಕ್ಷಣೆಗಾಗಿ ಆರೋಪಿ ಎರಡು ಕಾಲುಗಳಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಘಟನೆಯಲ್ಲಿ ಆರೋಪಿ ಮತ್ತು ಪೊಲೀಸ್ ಕಾನ್ ಸ್ಟೇಬಲ್ ಅಶೋಕ್ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಅಧಿಕಾರಿಗಳಿಗಳು ತಿಳಿಸಿದ್ದಾರೆ.
ಆರೋಪಿ ಆಂಧ್ರಪ್ರದೇಶದಲ್ಲಿ ಲಕ್ಷಾಂತರ ರು. ಸಾಲ ಮಾಡಿಕೊಂಡು, ನಗರಕ್ಕೆ ಬಂದು 20 ದಿನಗಳಿಂದ ಹೆಬ್ಬಗೋಡಿಯ ವಿನಾಯಕನಗರದಲ್ಲಿ ವಾಸವಾಗಿದ್ದ. ಈ ಮಧ್ಯೆ ಸಿಗರೇಟ್ ವ್ಯಾಪಾರ ಮಾಡುವ ಮಾದೇಶ್ ಮನೆ ಕಟ್ಟುತ್ತಿದ್ದು, ಬಾರಿ ಹಣವಿದೆ ಎಂದು ಭಾವಿಸಿದ್ದ. ಹೀಗಾಗಿ ನ.4ರಂದು ಮಾದೇಶ್ ಮನೆ ಬಳಿ ಹೋಗಿ ಸಾಲದ ರೂಪದಲ್ಲಿ 5-10 ಲಕ್ಷ ರು. ಕೇಳಿದ್ದ. ಮಾದೇಶ್ ಕೊಟ್ಟಿಲ್ಲ. ಅದರಿಂದ ಕೋಪಗೊಂಡು ಚಾಕುವಿನಿಂದ ಹತ್ಯೆಗೈದಿದ್ದ. ನ.6ರಂದು ತಾನು ಬಾಡಿಗೆಗೆ ಇದ್ದ ಅಂಗಡಿ ಮಾಲೀಕ ಬಾಲಪ್ಪರನ್ನು ರಿಯಲ್ ಎಸ್ಟೇಟ್ ವ್ಯವಹಾರ ಇದೆ ಎಂದು ಕರೆದೊಯ್ದು ಹಣ ಕೇಳಿದ್ದ. ಆಗ ಬಾಲಪ್ಪ ಕೊಡದಿದ್ದಾಗ ಕಾರಿನಲ್ಲೇ ಹತ್ಯೆಗೈದಿದ್ದ ಎಂದು ಎನ್ನಲಾಗಿದೆ.