ಬೆಂಗಳೂರು: ಹುಲಿ-ಆನೆಗಳು ಅರಣ್ಯದಿಂದ ಹೊರಗೆ ಬರಲು ಕಾರಣವೇನು ಎಂಬುದನ್ನು ಪತ್ತೆಹಚ್ಚಿ, ವೈಜ್ಞಾನಿಕ ಮಾರ್ಗದಲ್ಲಿ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯುವ ತುರ್ತು ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ, ಹುಲಿಗಳು ಮತ್ತು ಆನೆಗಳು ಕಾಡುಗಳಿಂದ ಹೊರಬರುತ್ತಿರುವುದಕ್ಕೆ ಕಾರಣಗಳೇನು ಎಂದು ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ವೇಳೆ ಅಧಿಕಾರಿಗಳು ಮನವರಿಕೆಯಾಗುವ ಉತ್ತರವನ್ನು ನೀಡಲು ವಿಫಲವಾದಾಗ, ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು,
ಅಲ್ಲದೆ, ಮಾನವ-ಪ್ರಾಣಿ ಸಂಘರ್ಷ ಅಂತ್ಯಕ್ಕೆ ವೈಜ್ಞಾನಿಕ ವಿಧಾನಗಳ ಮೂಲಕ ಪರಿಣಾಮಕಾರಿ ಪರಿಹಾರವನ್ನು ಕಂಡುಹಿಡಿಯುವ ತುರ್ತು ಅವಶ್ಯಕತೆಯಿದೆ ಎಂದು ಹೇಳಿದರು.
ಹುಲಿ-ಆನೆಗಳು ಅರಣ್ಯದಿಂದ ಹೊರಗೆ ಬರಲು ಕಾರಣವೇನು ಎಂಬುದನ್ನು ಪತ್ತೆಹಚ್ಚಿ, ವೈಜ್ಞಾನಿಕ ಮಾರ್ಗದಲ್ಲಿ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯುವ ತುರ್ತು ಅಗತ್ಯವಿದೆ. ಇದಕ್ಕಾಗಿ ಕಾಡಿನಲ್ಲಿರುವ ನೀರಿನ ಗುಂಡಿಗಳನ್ನು ತುಂಬಿಸಬೇಕು, ಲಾಂಟೆನಾ ತೆಗೆಸಬೇಕು, ಅರಣ್ಯದಲ್ಲಿ ಪ್ರಾಣಿಗಳಿಗೆ ಮೇವು ಬೆಳೆಸಬೇಕು, ಆನೆ, ಹುಲಿಗಳು ಹೊರಗೆ ಬರುವ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ಹೇಳಿದರು.
ಅರಣ್ಯ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಪ್ರತ್ಯೇಕವಾದ ಸಭೆ ಕರೆಯುತ್ತಿದ್ದೇವೆ. ಸಮಗ್ರ ಮಾಹಿತಿ ಮತ್ತು ಪರಿಹಾರದ ಬಗ್ಗೆ ಅಧ್ಯಯನ ನಡೆಸಿ ಪೂರ್ತಿ ಸಿದ್ಧತೆಯೊಂದಿಗೆ ಸಭೆಗೆ ಬರಬೇಕು. ಈಗಾಗಲೇ ಹೆಲ್ಪ್ ಲೈನ್ ತೆರೆಯಲಾಗಿದೆ. ಕಮಾಂಡ್ ಸೆಂಟರ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ ಎನ್ನುವ ಮಾಹಿತಿ ಇದೆ ಎಂದು ತಿಳಿಸಿದರು.
ಇದೇ ವೇಳೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಬಂದಿರುವ 7,000 ಅರ್ಜಿಗಳಲ್ಲಿ 5,900 ಅರ್ಜಿಗಳು ತಿರಸ್ಕರಿಸಿರುವುದನ್ನು ಸಿಎಂ ಪ್ರಶ್ನಿಸಿದರು.
ಇವು 2019-20ರಿಂದ ತಿರಸ್ಕರಿಲ್ಪಟ್ಟ ಅರ್ಜಿಗಳಾಗಿವೆ ಎಂದು ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ ಸಿಎಂಗೆ ತಿಳಿಸಿದರು. ಆದಾಗ್ಯೂ, ಸರಿಯಾದ ಕಾರಣವಿಲ್ಲದೆ ತಿರಸ್ಕರಿಸಲಾದ ಎಲ್ಲಾ ಅರ್ಜಿಗಳನ್ನು ಮರುಪರಿಶೀಲಿಸಬೇಕು ಮತ್ತು ರೈತರು, ಅರಣ್ಯ ನಿವಾಸಿಗಳ ಬಗ್ಗೆ ಅಂತಃಕರಣದಿಂದ ವರ್ತಿಸುವಂತೆ ಅರಣ್ಯ ಮತ್ತು ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಾಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿ ಆಗುತ್ತಿದೆಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಏತನ್ಮಧ್ಯೆ, ಎಚ್‌ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರು ಮಾನವ-ಪ್ರಾಣಿ ಸಂಘರ್ಷಗಳು ಹೆಚ್ಚಾಗಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯೇ ಕಾರಣ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಿಎಂ, ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಕಳಪೆ ಸಮನ್ವಯದಿಂದಾಗಿ ಯಾವುದೇ ಜೀವಹಾನಿ ಸಂಭವಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು