ನವೆಂಬರ್ 15ಕ್ಕೆ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಅದರಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಹೈಕಮಾಂಡ್ ಭೇಟಿ ಮಾಡಲು ಅವಕಾಶ ಸಿಕ್ಕಿದರೆ ಭೇಟಿಯಾಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15ರಂದು ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಕೇಳಿದ್ದೇನೆ. ಅವರು ಭೇಟಿಗೆ ಅವಕಾಶ ನೀಡಿದರೆ ನೋಡೋಣ ಭೇಟಿ ಮಾಡುತ್ತೇನೆ, ಇಲ್ಲದಿದ್ದರೆ ಅಂದೇ ಬೆಂಗಳೂರಿಗೆ ವಾಪಸ್ಸಾಗುತ್ತೇನೆ ಎಂದರು.
ಸಂಪುಟ ವಿಸ್ತರಣೆ
ಸಚಿವ ಸಂಪುಟ ವಿಸ್ತರಣೆ ಸಂಬಂಧಿಸಿದ ಪ್ರಶ್ನೆ ಕೇಳಿದಾಗ, ನವೆಂಬರ್ 15 ರಂದು ಪುಸ್ತಕ ಬಿಡುಗಡೆಗಾಗಿ ದೆಹಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರಿಂದ ಸಮಯ ಕೇಳಿದ್ದೇನೆ. ರಾಹುಲ್ ಗಾಂಧಿ ಸಮಯ ನೀಡಿದರೆ, ನಾನು ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸುತ್ತೇನೆ, ಇಲ್ಲದಿದ್ದರೆ ನಾನು ಅದೇ ರಾತ್ರಿ ಬೆಂಗಳೂರಿಗೆ ಹಿಂತಿರುಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ದೆಹಲಿ ಕಾರು ಸ್ಫೋಟದ ಕುರಿತ ಪ್ರಶ್ನೆಗೆ, ಈ ಘಟನೆ ಬಿಹಾರ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಸ್ಫೋಟದಲ್ಲಿ ಒಂಬತ್ತು ಜೀವಗಳನ್ನು ಕಳೆದುಕೊಂಡಿದ್ದಕ್ಕೆ ದುಃಖವಾಗುತ್ತದೆ, ಇದು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ, ದೆಹಲಿ ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರ ಸಮಗ್ರ ತನಿಖೆ ಮಾಡಲಿ ಎಂದರು.
ಭಾರತ ಬಹುತ್ವ ಸಂಸ್ಕೃತಿ ಹೊಂದಿರುವ ದೇಶ. ಇಲ್ಲಿ ಎಲ್ಲಾ ಧರ್ಮೀಯರೂ ಇದ್ದಾರೆ. ಆರ್ ಎಸ್ ಎಸ್ ನವರು ಮೊದಲು ದೇಶದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ ಬಗ್ಗೆ ಮಾತನಾಡಲಿ ಎಂದರು.