ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದೀಗ ಆಡಳಿತ ಪಕ್ಷ ಕಾಂಗ್ರೆಸ್ ನ ಶಾಸಕ ರಾಜು ಕಾಗೆಯವರೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಸುದ್ದಿಯಾಗಿದ್ದಾರೆ.
ರಾಜು ಕಾಗೆ ಪತ್ರದ ಬೆನ್ನಲ್ಲೇ ಉತ್ತರ ಕರ್ನಾಟಕ ಹೋರಾಟ ಸಮಿತಿ, ಉತ್ತರ ಕರ್ನಾಟಕ ವಿಕಾಸ ವೇದಿಕೆಯಿಂದ ಮೂರು ಬೇಡಿಕೆಗಳಿಗೆ ಆಗ್ರಹ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಇವನ್ನು ಈಡೇರಿಸದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಎಚ್ಚರಿಕೆ ನೀಡಲಾಗಿದೆ.
ರಾಜು ಕಾಗೆಯವರ ಪತ್ರದಲ್ಲಿ ಏನಿದೆ?
ಉತ್ತರ ಕರ್ನಾಟಕ ರಾಜ್ಯವನ್ನಾಗಿಸಿ ಎಂದು ರಾಷ್ಟ್ರಪತಿ, ಪ್ರಧಾನಿ, ಸಿಎಂಗೆ ಪತ್ರ ಬರೆದಿರುವ ಶಾಸಕ ರಾಜು ಕಾಗೆ, 15 ಜಿಲ್ಲೆಗಳನ್ನೊಳಗೊಂಡ ಉತ್ತರ ಕರ್ನಾಟಕ ಪ್ರತ್ಯೇಕವಾಗಿಸಲು ಕೋರಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯ ಆಗುತ್ತಿದ್ದು, ಮಲತಾಯಿ ಧೋರಣೆ ತಾರತಮ್ಯ ತೋರಲಾಗುತ್ತಿದೆ.
ಆ ಮೂಲಕ ಉತ್ತರ ಕರ್ನಾಟಕ ಹೋರಾಟ ಸಮಿತಿ ಹೋರಾಟಕ್ಕೆ ಶಾಸಕ ಕಾಗೆ ಬೆಂಬಲ ನೀಡಿದ್ದು, ಚಳಿಗಾಲದ ಅಧಿವೇಶನದಲ್ಲೂ ಈ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ. ದಿವಂಗತ ಉಮೇಶ್ ಕತ್ತಿ ನಿಧನದ ಬಳಿಕ ಆಪ್ತ ಶಾಸಕ ಕಾಗೆಯಿಂದ ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ವ್ಯಕ್ತವಾಗಿದೆ.
ಪ್ರತ್ಯೇಕ ರಾಜ್ಯ ಧ್ವನಿ ಎತ್ತಿದ್ದ ಉಮೇಶ್ ಕತ್ತಿ
ದೇಶದಲ್ಲಿ 30 ರಾಜ್ಯಗಳಿವೆ. ಈ ಪೈಕಿ 50 ರಾಜ್ಯಗಳನ್ನಾಗಿ ಮಾಡಬೇಕು ಎನ್ನುವ ಚರ್ಚೆ ಆಗ್ತಿದೆ. ಉತ್ತರ ಪ್ರದೇಶದಲ್ಲಿ 21 ಕೋಟಿ ಜನಸಂಖ್ಯೆ ಇದ್ದು 4 ರಾಜ್ಯವಾಗಬೇಕು. ಮಹಾರಾಷ್ಟ್ರದಲ್ಲಿ 11 ಕೋಟಿ ಜನಸಂಖ್ಯೆ ಇದ್ದು ಅದನ್ನು 3 ರಾಜ್ಯ ಮಾಡಬೇಕು. ಅದರಂತೆ ಕರ್ನಾಟಕ ಆರೂವರೆ ಕೋಟಿ ಜನಸಂಖ್ಯೆ ಇದೆ. ಈ ಹಿನ್ನೆಲೆ ಎರಡು ರಾಜ್ಯಗಳಾಗಿ ವಿಂಗಡಣೆ ಆಗಬೇಕು.
ನಾನು 9 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯವಾಗಬೇಕು. ಮುಂದೆಯೂ ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿಯಲ್ಲಿದ್ದು ಮುಖ್ಯಮಂತ್ರಿ ಆಗುವ ಅರ್ಹತೆ ನನಗಿದೆ. ಪ್ರತ್ಯೇಕ ರಾಜ್ಯವಾದರೂ ನಾವು ಕನ್ನಡಿಗರೇ. ಕರ್ನಾಟಕ ಎರಡು ಭಾಗ ಆಗಬೇಕು, ನಾವು ಕೂಡಾ ಕನ್ನಡ ಭಾಷೆಯನ್ನೇ ಮಾತನಾಡುತ್ತೇವೆ. ನಾವು ಅಚಲ ಕನ್ನಡಿಗರು ಎಂದು ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಹೇಳಿದ್ದು ಭಾರೀ ಸುದ್ದಿಯಾಗಿತ್ತು.