ಬೆಂಗಳೂರು: ದಂಪತಿ ಮತ್ತು ಅವರ ಮಗುವಿಗೆ ಗಾಯಗೊಳಿಸಿದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಕೊಡಿಗೇಹಳ್ಳಿ ನಿವಾಸಿ ಸುಕೃತ್ ಗೌಡ ಎಂದು ಗುರುತಿಸಲಾಗಿದ್ದು, ವೈಟ್‌ಫೀಲ್ಡ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಘಟನೆ ಅಕ್ಟೋಬರ್ 26ರ ರಾತ್ರಿ ನ್ಯೂ ಬಿಇಎಲ್ ರಸ್ತೆಯ ರಾಮಯ್ಯ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಅಂಕಿತಾ ಪಟೇಲ್ (31), ಪತಿ ವಿನೀತ್ ಎ (33) ಮತ್ತು ಅವರ ಮಗನೊಂದಿಗೆ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಕಡೆಗೆ ಹೋಗುತ್ತಿದ್ದಾಗ, ಅತಿ ವೇಗವಾಗಿ ಬಂದ ಕೆಂಪು ಬಣ್ಣದ ಟಾಟಾ ಕರ್ವ್ ಕಾರು ಹಿಂಬದಿನಿಂದ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮೂವರೂ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದು, ಅಂಕಿತಾ ಮತ್ತು ವಿನೀತ್ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆಯ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.
ನಿರಂತರ ನೋವಿನಿಂದ ಬಳಲುತ್ತಿದ್ದ ವಿನೀತ್ ಅವರನ್ನು ನಂತರ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸುವ ಅಗತ್ಯವಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಅಪಘಾತ ನಡೆಸಿ, ಸ್ಥಳದಿಂದ ಕಾಲ್ಕಿತ್ತಿದ್ದಕ್ಕಾಗಿ ಅಕ್ಟೋಬರ್ 28 ರಂದು ಅಪರಿಚಿತ ಕಾರು ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ನವೆಂಬರ್ 6 ರಂದು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕೊಲೆಯತ್ನ ಆರೋಪವನ್ನು ಸೇರಿಸಿದರು ಮತ್ತು ಪ್ರಕರಣವನ್ನು ಸದಾಶಿವನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದರು ಎಂದು ಅಧಿಕಾರಿ ಹೇಳಿದರು.
ಮರುದಿನ, ಬಾಲಾಜಿ ಲೇಔಟ್ ಬಳಿ ಆರೋಪಿ ಸುಕೃತ್ ಗೌಡನನ್ನು ಬಂಧಿಸಲಾಗಿದೆ. ವಿಚಾರಣೆ ಸಮಯದಲ್ಲಿ, ಆತ ಅಪರಾಧವನ್ನು ಒಪ್ಪಿಕೊಂಡನು. ಅಪಘಾತಕ್ಕೆ ಕಾರಣವಾದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.