ಬೆಂಗಳೂರು: ಕೋವಿಡ್-19 ನಿರ್ವಹಣೆಯಲ್ಲಿನ ಅಕ್ರಮಗಳು ಮತ್ತು ರಾಜ್ಯದ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಗಳ ಕುರಿತು ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ವರದಿಯನ್ನು ಅಧ್ಯಯನ ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟ ಉಪಸಮಿತಿಗಳು ವರದಿಗಳನ್ನು ಸಲ್ಲಿಸುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಅನುಷ್ಠಾನದ ಪ್ರಗತಿ ಪರಿಶೀಲನೆಗಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ನೇತೃತ್ವದ ಸಂಪುಟ ಉಪಸಮಿತಿಯ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿ ಸಭೆಯಲ್ಲಿ, ಸೂಕ್ತ ಶಿಫಾರಸುಗಳೊಂದಿಗೆ ವರದಿಗಳನ್ನು ಆದಷ್ಟು ಬೇಗ ಸಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದರು.
ಮೈಸೂರಿನ ಸರ್ಕಾರಿ ಅತಿಥಿ ಗೃಹ ನೌಕರರ ವಸತಿ ನಿಲಯದ ಆವರಣದಲ್ಲಿ ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ಶಾಸಕ ಮತ್ತು ಸಂಸದರ ಭವನ ನಿರ್ಮಾಣಕ್ಕೂ ಸಂಪುಟ ಅನುಮೋದನೆ ನೀಡಿದೆ. 100 ವರ್ಷಗಳಿಗೂ ಹಳೆಯದಾದ ಅಸ್ತಿತ್ವದಲ್ಲಿರುವ ಅತಿಥಿಗೃಹವನ್ನು ನೆಲಸಮ ಮಾಡಲಾಗುವುದಿಲ್ಲ ಆದರೆ ಆವರಣದಲ್ಲಿ ಒಂದು ಎಕರೆ ಜಾಗವನ್ನು ಬಳಸಿಕೊಳ್ಳಲಾಗುವುದು ಎಂದು ಪಾಟೀಲ್ ಹೇಳಿದರು.