ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಸೇರಿದಂತೆ ಎಪ್ಪತ್ತು ಜನರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದರು.
ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ವಿವಿಧ ರಾಜ್ಯಗಳಾದ್ಯಂತ ನಡೆದ ಚುನಾವಣೆಗಳಲ್ಲಿ ದೊಡ್ಡ ಪ್ರಮಾಣದ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದರು.
ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಚಿಬ್, ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿ ಮನೀಶ್ ಶರ್ಮಾ, ಕೆಪಿವೈಸಿಸಿ ಅಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ರಾಜ್ಯಸಭಾ ಸಂಸದ ಜಿ ಸಿ ಚಂದ್ರಶೇಖರ್ ಸೇರಿದಂತೆ ಕರ್ನಾಟಕದ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಲಾಡ್, ಬಿಹಾರದಲ್ಲಿ ಚುನಾವಣೆ ಗೆಲ್ಲಲು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ರೂ.10, 000 ನೇರ ವರ್ಗಾವಣೆ ಮಾಡಲಾಗಿದೆ. ಇದಲ್ಲದೇ 65 ಲಕ್ಷ ಮತದಾರರ ಹೆಸರನ್ನು SIR ವೋಟರ್ ಲಿಸ್ಟ್ ನಿಂದ ಡಿಲೀಟ್ ಮಾಡಲಾಗಿದೆ. 20 ಲಕ್ಷ ಮತದಾರರು ಹೊಸದಾಗಿ ಸೇರಿಸಲಾಗಿದೆ. ಪ್ರಧಾನಿ ಮೋದಿ ತಂತ್ರಜ್ಞಾನ, ಉಪಗ್ರಹ ಬಗ್ಗೆ ಹೆಚ್ಚಿಗೆ ಮಾತನಾಡುತ್ತಾರೆ ಆದರೆ, ಚುನಾವಣಾ ಆಯೋಗ ಮತದಾರರ ಪಟ್ಟಿಯ ಡಿಜಿಟಲ್ ಮಾದರಿ ಒದಗಿಸಿಲ್ಲ ಎಂದು ಆರೋಪಿಸಿದರು.
ಬಿಹಾರ ಚುನಾವಣೆಯಲ್ಲಿ ಸೋತಿದ್ದಕ್ಕೆ ಪ್ರತಿಭಟನೆ ಮಾಡುತ್ತಿಲ್ಲ. ಬದಲಾಗಿ, ಯಾಕೆ ಸೋತೆವು ಅಂತ ತೋರಿಸುವ ಪ್ರಯತ್ನವಾಗಿದೆ. ದೊಡ್ಡ ಪ್ರಮಾಣದಲ್ಲಿ ವೋಟರ್ ಲಿಸ್ಟ್ ನಲ್ಲಿ ಬದಲಾವಣೆ ಆಗಿತ್ತು. ಇದನ್ನು ರಾಹುಲ್ ಗಾಂಧಿ ದೇಶದ ಗಮನ ಸೆಳೆದಿದ್ರು. ಎಲೆಕ್ಷನ್ ಕಮೀಷನರ್ ಜ್ಙಾನೇಶ್ ಕುಮಾರ್ ಅವರು ಬಂದು ಐದಾರು ತಿಂಗಳಾಯ್ತು. ಬಿಹಾರ, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬದಲಾವಣೆ ನಡೆದಿದೆ. ನಾವು ದೇಶದ ಜನರಿಗೆ ಮಾಹಿತಿ ಕೊಡುವ ಪ್ರಯತ್ನ ಮಾಡಿದ್ದೇವೆ ಎಂದರು.
ಸಂವಿಧಾನದ ರಕ್ಷಣೆ ಗಾಗಿ ಮತಗಳ್ಳತನ ಅಭಿಯಾನ ಮಾಡುತ್ತಿದ್ದೇವೆ. ಮತದಾನ ಪ್ರತಿಯೊಬ್ಬರ ಅಧಿಕಾರ. ಇದರಲ್ಲಿ ಮೋಸ ಆಗಬಾರದು. ಬಿಹಾರದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ಚುನಾವಣಾ ಆಯೋಗದ ಜೊತೆ ಸೇರಿ ಪಿತೂರಿ ನಡೆಸಿದೆ ಎಂದು ಸಲೀಂ ಅಹ್ಮದ್ ಹೇಳಿದರು.