ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಇಂದು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಲೋಕಸಭೆ ವಿಪಕ್ಷ ನಾಯಕರೂ ಆಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಸಚಿವ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಚರ್ಚಿಸಿ ಸಂಪುಟ ಪುನಾರಚನೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ರಾಜ್ಯದಲ್ಲಿ 8ರಿಂದ 12 ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಯಾರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಇನ್ನು ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿರುವುದರಿಂದ ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ನವೆಂಬರ್ ಕಾಂತ್ರಿ ನಡೆಯಲಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಶುಕ್ರವಾರ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಜ್ಞಾನಭಾರತಿ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ಪೊಲೀಸರು ತಿಮ್ಮಕ್ಕ ಅವರಿಗೆ ವಿಶೇಷ ಗೌರವ ಸಲ್ಲಿಸಿದರು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ವೃಕ್ಷಮಾತೆಗೆ ಅಂತಿಮ ಗೌರವ ಸಲ್ಲಿಸಿದರು.ತಿಮ್ಮಕ್ಕ ಅವರ ಗೌರವಾರ್ಥ ರಾಜ್ಯದ 114 ಸ್ಥಳದಲ್ಲಿ ತಲಾ 114 ಸಸಿ ನೆಟ್ಟು ಪೋಷಣೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 2 ದಿನಗಳಲ್ಲಿ 28 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮೃಗಾಲಯದ ಎಸಿಫ್ ನಾಗರಾಜ್ ಬಾಳೆಹೊಸೂರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮೃಗಗಳಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್‌ನಿಂದ ಸಾವು ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ. ಆದರೆ, ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಲು ಬೆಂಗಳೂರಿನ ಬನ್ನೇರುಘಟ್ಟ ಪ್ರಾಣಿಶಾಸ್ತ್ರ ಉದ್ಯಾನವನದ ಅಧಿಕಾರಿಗಳಿಗೆ ಮಾದರಿಯನ್ನು ಕಳುಹಿಸಿದ್ದೇವೆಂದು ಹೇಳಿದ್ದಾರೆ. ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾವಿನ ಬಗ್ಗೆ ತನಿಖೆಗೆ ಆದೇಶಿಸಿದ್ದು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಕಲಬೆರಕೆ ತುಪ್ಪವನ್ನು ಉತ್ಪಾದಿಸಿ, ನಕಲಿ ನಂದಿನಿ ಬ್ರಾಂಡ್ ಸ್ಯಾಚೆಟ್‌ಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿ ಬೆಂಗಳೂರಿನಾದ್ಯಂತ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಕೆಎಂಎಫ್ ವಿಜಿಲೆನ್ಸ್ ವಿಂಗ್ ಮತ್ತು ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಭೇದಿಸಿದ್ದಾರೆ. ಕೆಎಂಎಫ್ ವಿತರಕ, ಅವರ ಮಗ ಮತ್ತು ಇತರ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 1.26 ಕೋಟಿ ರೂ. ಮೌಲ್ಯದ ಸುಮಾರು 8,136 ಲೀಟರ್ ಕಲಬೆರಕೆ ತುಪ್ಪ, ಪೂರೈಕೆಗೆ ಬಳಸಿದ ನಾಲ್ಕು ವಾಹನಗಳು, ನಕಲಿ ನಂದಿನಿ ತುಪ್ಪ ತಯಾರಿಸಲು ಬಳಸಿದ ಯಂತ್ರೋಪಕರಣಗಳು ಮತ್ತು ತೆಂಗಿನಕಾಯಿ ಮತ್ತು ತಾಳೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ.
2022 ರಲ್ಲಿ ಭೇಟಿಯಾದ ಉದ್ಯಮಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕನ್ನಡ ಚಲನಚಿತ್ರ ನಟಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಉದ್ಯಮಿ, ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಬಂಧಿಸಲಾಗಿದೆ. ಕನ್ನಡದಲ್ಲಿ 9ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ನಟಿ ಅಭಿನಯಿಸಿದ್ದಾರೆ. ಉದ್ಯಮಿ, ನಿರ್ಮಾಪಕ ತನ್ನ ಚಲನವಲನಗಳನ್ನು ಪತ್ತೆಹಚ್ಚುತ್ತಿದ್ದರು, ಸಾಮಾಜಿಕ ಮಾಧ್ಯಮದಲ್ಲಿ ತನ್ನ ಫೋಟೋಗಳನ್ನು ಮಾರ್ಫ್ ಮಾಡಿದ್ದರು. ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು ಮತ್ತು ಇಚ್ಛೆಗೆ ವಿರುದ್ಧವಾಗಿ ಅವರ ಜೊತೆ ಸಂಬಂಧವನ್ನು ಉಳಿಸಿಕೊಳ್ಳಲು ಒತ್ತಾಯಿಸಿದರು ಎಂದು ನಟಿ ಆರೋಪಿಸಿದ್ದಾರೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂಟ್ವಾಳ ತಾಲ್ಲೂಕಿನ ಬಿ.ಸಿ ರೋಡ್ ಸರ್ಕಲ್ ಬಳಿ ಶನಿವಾರ ಬೆಳಗಿನ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ 9 ಜನರು ಉಡುಪಿಯ ಕೃಷ್ಣ ಮಠಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬಂಟ್ವಾಳದ ಬಿ.ಸಿ. ರಸ್ತೆ ತಲುಪಿದಾಗ, ಇನ್ನೋವಾ ಕಾರಿನ ಚಾಲಕ ನಿಯಂತ್ರಣ ತಪ್ಪಿ ನಾರಾಯಣ ಗುರು ವೃತ್ತಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ, 9 ಜನರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 6 ಮಂದಿ ತೀವ್ರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.