ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವಕನನ್ನು ಲಾಡ್ಜ್‌ಗೆ ಕರೆದೊಯ್ದ ಯುವತಿ, ಆತನ ಪ್ರಜ್ಞೆ ತಪ್ಪಿಸಿ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಕವಿಪ್ರಿಯಾ ಎಂಬಾಕೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆಕೆಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಪೀಣ್ಯದ ನಾಗಸಂದ್ರದ ಪೇಯಿಂಗ್ ಗೆಸ್ಟ್ (ಪಿ.ಜಿ)ನಲ್ಲಿ ವಾಸವಾಗಿದ್ದ ಯುವಕ, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ‘ಹ್ಯಾಪನ್ ಆ್ಯಪ್’ ಹೆಸರಿನ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯನ್ನು ಪರಿಚಯಿಸಿಕೊಂಡಿದ್ದ.
ಇಬ್ಬರೂ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಮಾತನಾಡುತ್ತಿದ್ದರು. ನವೆಂಬರ್ 1ರಂದು ಇಂದಿರಾನಗರದ ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರು ಭೇಟಿಯಾಗಿ ಮದ್ಯದ ಪಾರ್ಟಿ ಮಾಡಿದ್ದಾರೆ.
ಮದ್ಯ ಸೇವನೆ ಬಳಿಕ ಪಿಜಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದ ಯುವತಿ, ಲಾಡ್ಜ್ ಒಂದರಲ್ಲಿ ಕೊಠಡಿ ಬುಕ್ ಮಾಡಿದ್ದಳು. ಆನ್ ಲೈನ್ ಮೂಲಕ ಊಟ ತರಿಸಿಕೊಂಡು ಇಬ್ಬರೂ ಸೇವಿಸಿದ್ದರು. ನಂತರ ಯುವತಿಯು ಕೊಟ್ಟ ನೀರು ಕುಡಿದ ಬಳಿಕ ಯುವಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ಬೆಳಗ್ಗೆ ಎದ್ದು ನೋಡಿದಾಗ ಚಿನ್ನದ ಸರ, ಚಿನ್ನದ ಕೈಬಳೆ ಸೇರಿದಂತೆ 58 ಗ್ರಾಂ ಚಿನ್ನಾಭರಣ, ರೂ.10 ಸಾವಿರ ನಗದನ್ನು ದೋಚಿ ಪರಾರಿಯಾಗಿರುವುದು ತಿಳಿದಿದೆ, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಬೆನ್ನಲ್ಲೇ ಪೊಲೀಸರು ತಮಿಳುನಾಡಿನ ಕರೂರಿನ ಕವಿಪ್ರಿಯಾ (24) ಮತ್ತು ಆಕೆಯ ಗೆಳೆಯ ಹರ್ಷವರ್ಧನ್ (25)ನನ್ನು ಬಂಧನಕ್ಕೊಳಪಡಿಸಿದ್ದಾರೆ.
ವಿಚಾರಣೆ ವೇಳೆ ಇಬ್ಬರೂ ಮಾಡಿದ ಮೊದಲ ಅಪರಾಧ ಕೃತ್ಯ ಎಂಬುದು ತಿಳಿದುಬಂದಿದೆ. ಇಬ್ಬರೂ ಡೇಟಿಂಗ್ ಆ್ಯಪ್ ನಲ್ಲಿ ಭೇಟಿಯಾಗಿ, ಸಂಬಂಧ ಹೊಂದಿದ್ದು, ಐಷಾರಾಮಿ ಜೀವನ ನಡೆಸಲು ಕೆಲವು ಸಾಲ ಆ್ಯಪ್‌ಗಳಲ್ಲಿ ಸಾಲ ಪಡೆದಿದ್ದರು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ, ಡೇಟಿಂಗ್ ಆ್ಯಪ್ ಮೂಲಕ ವಂಚನೆ ಮಾಡಲು ಪಿತೂರಿ ನಡೆಸಿದ್ದರು. ಇದೀಗ ಇಬ್ಬರ ವಿರುದ್ಧ ಪೊಲೀಸರು ಕಳ್ಳತನ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.