ಕಳೆದ ಒಂದು ತಿಂಗಳಿನಿಂದ ತೀವ್ರ ಸಂಘರ್ಷ ಮತ್ತು ಚರ್ಚೆಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಭಾನುವಾರ ಮಧ್ಯಾಹ್ನ ಪೊಲೀಸ್ ಬಿಗಿ ಭದ್ರತೆಯ ನಡುವೆ ಸಂಪನ್ನಗೊಂಡಿತು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ಪಗಾವಲು ನಡುವೆ ಪಥಸಂಚಲನ ನಡೆದಿದೆ. ಪಥಸಂಚಲನಕ್ಕೆ ಜಿಲ್ಲಾಡಳಿತ ಷರತ್ತುಬದ್ದ ಅನುಮತಿ ನೀಡಿದ್ದು, ಸುಮಾರು 300ಕ್ಕೂ ಹೆಚ್ಚು ಗಣವೇಶಧಾರಿಗಳು ಹಾಗೂ 50 ಘೋಷ ವಾದಕರು ಭಾಗವಹಿಸಿದ್ದರು. ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಆರ್ ಎಸ್ ಎಸ್ ಪಥ ಸಂಚಲನ ವೀಕ್ಷಿಸಲು ಚಿತ್ತಾಪುರದ ರಸ್ತೆಗಳ ಇಕ್ಕೆಲುಗಳಲ್ಲಿ ಜನತೆ ಕಿಕ್ಕಿರಿದು ತುಂಬಿದ್ದು ಕಂಡು ಬಂತು. ಮಾರ್ಗದುದ್ದಕ್ಕೂ ಜನರು ಗಣವೇಶಧಾರಿಗಳಿಗೆ ಪುಷ್ಪಗಳನ್ನು ಚೆಲ್ಲುವ ಮೂಲಕ ಸ್ವಾಗತ ಕೋರಿ, ಸಂಘದ ಶಿಸ್ತುಬದ್ಧ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.
ಇನ್ನು ಆರ್ ಎಸ್ಎಸ್ ಪಥಸಂಚಲನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, 100 ವರ್ಷಗಳಲ್ಲಿ ಮೊದಲ ಬಾರಿಗೆ ಚಿತ್ತಾಪುರದಲ್ಲಿ ಕಾನೂನು ಮತ್ತು ಸಾಂವಿಧಾನಿಕ ಅನುಮತಿಯೊಂದಿಗೆ ಪಥಸಂಚಲನ ನಡೆಸುವ ಮೂಲಕ ನಿಯಮಗಳನ್ನು ಪಾಲಿಸಿದೆ, ನಾನು ಪಥಸಂಚಲನವನ್ನು ಎಂದಿಗೂ ವಿರೋಧಿಸಿಲ್ಲ ಎಂದು ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ RSSಗೆ ಹಣ ಹೋಗಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೀನಿ. ಎಷ್ಟು ಲೂಟಿ ಮಾಡಿದ್ದಾರೆನ್ನುವುದು ಗೊತ್ತಾಗುತ್ತದೆ. ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುವೆ ಎಂದು ಹೇಳಿದ್ದಾರೆ.
ಬಾಗಲಕೋಟೆಯ ಮುಧೋಳದಲ್ಲಿ ಕಬ್ಬಿಗೆ ಯೋಗ್ಯ ಬೆಲೆಗಾಗಿ ಕಬ್ಬು ಬೆಳಗಾರರು ಮಾಡಿದ್ದ ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ಗಳಿಗೆ ಬೆಂಕಿ, ಕಲ್ಲು ತೂರಾಟ ಮಾಡಿದ್ದ ಪ್ರಕರಣದ ಸಂಬಂಧ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ.
ಪ್ರತಿಭಟನೆ ವೇಳೆ ಉದ್ರಿಕ್ತರ ಗುಂಪು ಸಂಗಾನಟ್ಟಿ ಬಳಿ ಎರಡು ಟ್ರೇಲರ್ನ ಟ್ರ್ಯಾಕ್ಟರ್ ತಳ್ಳಿ ಬೆಂಕಿ ಹಚ್ಚಿತ್ತು. ನಂತರ ಗೋದಾವರಿ ಕಾರ್ಖಾನೆ ಆವರಣದಲ್ಲಿನ 20ಕ್ಕೂ ಅಧಿಕ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಐದು ಬೈಕ್ ಬೆಂಕಿಗಾಹುತಿಯಾಗಿದ್ದವು. ಇದೇ ವೇಳೆ ಎಎಸ್ಪಿ ಮಹಾಂತೇಶ್ವರ ಜಿದ್ದಿ ಅವರ ಕಾಲು ಮುರಿದಿತ್ತು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕಲ್ಲು ತೂರಾಟ, ಪೊಲೀಸರಿಗೆ ಗಾಯ, ಪೊಲೀಸ್ ವಾಹನ ಜಖಂಗೊಳಿಸಿದ ಆರೋಪ ಹಿನ್ನೆಲೆ ಕಾರ್ಖಾನೆ ಪರವಾಗಿದ್ದ ಗುಂಪಿನ 5 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.
ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಕದ್ದು ಸಾಗಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿಮಿಟೆಡ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ ಕಬ್ಬಿಣದ ಅದಿರು ಅಕ್ರಮ ರಫ್ತಿನಿಂದ ಸರ್ಕಾರದ ಖಜಾನೆಗೆ ಸುಮಾರು 44.09 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ. ಬಳ್ಳಾರಿಯಿಂದ ಬೇಲೆಕೇರಿ ಬಂದರಿಗೆ ಸುಮಾರು 8 ಲಕ್ಷ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ನಲ್ಲಿ ಇ.ಡಿ.ಅಧಿಕಾರಿಗಳು ಸತೀಶ್ ಸೈಲ್ ಅವರನ್ನು ಬಂಧಿಸಿದ್ದರು.
ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಕೃಷಿ ಮೇಳ 2025 ಭಾನುವಾರ ಮುಕ್ತಾಯಗೊಂಡಿದೆ. ಈ ಕಾರ್ಯಕ್ರಮ ರೈತರು, ಕೃಷಿ ಉತ್ಸಾಹಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ 54 ಲಕ್ಷ ಜನರನ್ನು ಆಕರ್ಷಿಸಿದ್ದು, ಪ್ರದರ್ಶನಗಳನ್ನು ಅನ್ವೇಷಿಸಿದ್ದಾರೆ. ಕೃಷಿ ಮೇಳ ಒಟ್ಟು 5.17 ಕೋಟಿ ರೂ. ಆದಾಯ ಗಳಿಸಿದೆ.
3 ದಿನಗಳ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಅಧಿಕಾರಿಗಳ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪದ ಮೇಲೆ ಹುಬ್ಬಳ್ಳಿಯಲ್ಲಿ ಭಾನುವಾರ ಬೆಳಿಗ್ಗೆ ಇಬ್ಬರು ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ
ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಟೂರು ರಸ್ತೆಯಲ್ಲಿ ಎಂಟರಿಂದ ಹತ್ತು ಜನರು ಮಲಿಕ್ ಜಾನ್ (27) ಎಂಬಾತನನ್ನು ಇರಿದು ಕೊಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತಂಡ ಬಂಧಿತರನ್ನು ಸ್ಥಳ ಪರಿಶೀಲನೆಗಾಗಿ ಮಂಟೂರು ರಸ್ತೆಗೆ ಕರೆದೊಯ್ದಿತು. ಈ ವೇಳೆ ಸ್ಥಳದಲ್ಲೇ ಆರೋಪಿಗಳು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.