ಬೆಂಗಳೂರು: ಐದು ದಿನಗಳ ಕಾಲ ನಡೆಯಲಿರುವ ಬಸವನಗುಡಿ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸೋಮವಾರ ಅಧಿಕೃತ ಚಾಲನೆ ದೊರೆಯಲಿದೆ. ಈಗಾಗಲೇ ಬಸವನಗುಡಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಲಕ್ಷಾಂತರ ಜನರು ಜಾತ್ರೆಯಲ್ಲಿ ಸಂಭ್ರಮಿಸುತ್ತಿದ್ದಾರೆ.
ಬಸವನಗುಡಿಯ ಬಸವಣ್ಣ ದೇವಾಲಯದಲ್ಲಿ ನಡೆಯುವ ಈ ಪರಿಷೆಯನ್ನು ಇದೇ ಮೊದಲ ಬಾರಿಗೆ 2 ದಿನದಿಂದ 5 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ.
ಇಂದು ಬೆಳಿಗ್ಗೆ 10 ಗಂಟೆಗೆ ಕಡಲೆಕಾಯಿ ಪರಿಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ.
21 ಬಸವಣ್ಣಗಳನ್ನು ದೇವಸ್ಥಾನಕ್ಕೆ ಆಹ್ವಾನಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
ಈ ವರ್ಷ ಜಾತ್ರೆ ಪ್ಲಾಸ್ಟಿಕ್ ಮುಕ್ತವಾಗಿರಲಿದ್ದು, ಸಂಪ್ರದಾಯದಂತೆ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ರೈತರು ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ತಮ್ಮ ಮೊದಲ ಕಡಲೆಕಾಯಿ ಸುಗ್ಗಿಯೊಂದಿಗೆ ಆಗಮಿಸಿದ್ದಾರೆ.
ಪರಿಷೆ ಹಿನ್ನೆಲೆ ಸ್ಥಳೀಯ ವ್ಯಾಪಾರಿಗಳಿಗೆ ಸ್ವಲ್ಪ ರೀತಿಯಲ್ಲಿ ಹೊಡೆತ ಬೀಳಲಿದ್ದು, ಇನ್ನೂ ಕೆಲವು ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಾಗುವ ನಿರೀಕ್ಷೆಗಳಿವೆ.
ಬಸವನಗುಡಿ ವ್ಯಾಪಾರಿಗಳ ಸಂಘದ ವೆಂಕಟೇಶ್ ಅವರು ಮಾತನಾಡಿ, ಸರ್ಕಾರ 5 ದಿನಗಳ ಕಾಲ ಪರಿಷೆಯನ್ನು ಘೋಷಿಸಿದ್ದರೂ, 10-12 ದಿನಗಳ ಕಾಲ ನಮ್ಮ ವ್ಯಾಪಾರ-ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಮಾರಾಟಗಾರರು ಮೇಳಕ್ಕೆ ಒಂದೇ ರೀತಿಯ ವಸ್ತುಗಳನ್ನು ತರುವುದರಿಂದ ನಮಗೆ ಮಾರಾಟ ಕಡಿಮೆಯಾಗುತ್ತದೆ. ಆದರೆ, ವರ್ಷಕ್ಕೊಮ್ಮೆ ಮಾತ್ರ ಜಾತ್ರೆ ನಡೆಯುವುದರಿಂದ ಸಣ್ಣ ನಷ್ಟವನ್ನು ನಾವು ಲೆಕ್ಕಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಜಾತ್ರೆಯಲ್ಲಿ ಸ್ಥಳೀಯ ಅಂಗಡಿಗಳಲ್ಲಿ ಮಾರಾಟ ಕಡಿಮೆಯಾದರೂ ತಿನಿಸುಗಳು, ಜ್ಯೂಸ್ ಅಂಗಡಿಗಳು, ಬೇಕರಿಗಳು, ಬೀದಿ-ಆಹಾರ ಮಾರಾಟಗಾರರು ಮತ್ತು ರೆಸ್ಟೋರೆಂಟ್‌ಗಳು ಗ್ರಾಹಕರಲ್ಲಿ ತೀವ್ರ ಏರಿಕೆಯನ್ನು ಕಂಡು ಬಂದಿದೆ. ಒಂದು ಕಡೆ ವ್ಯಾಪಾರ ಕಡಿಮೆಯಾದರೂ ಮತ್ತೊಂದೆಡೆ ಅದು ಹೆಚ್ಚಾಗುತ್ತದೆ. ಜನಸಂದಣಿಯೂ ಹೆಚ್ಚಾಗುತ್ತದೆ. ಜಾತ್ರೆಗೆ ಒಮ್ಮೆ ಬಂದು ಹೋಗುವ ಜನರು ಮತ್ತೊಮ್ಮೆ ಬಂದು ಖರೀದಿ ಮಾಡುತ್ತಾರೆಂದು ಹೇಳಿದ್ದಾರೆ.