ಕಾರವಾರ: ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಅಂಕೋಲಾದ ಕಂಚಿನ ಬಾಗಿಲು ಬಳಿ ಇಂದು ಮಂಗಳವಾರ ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಟ್ಯಾಂಕರ್‌ನಲ್ಲಿದ್ದ ಮಿಥೆನ್ ಸೋರಿಕೆಯಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಟ್ಯಾಂಕರ್ ಗುಜರಾತ್ ನಿಂದ ಹುಬ್ಬಳ್ಳಿ-ಯಲ್ಲಾಪುರ ಮೂಲಕ ಉಡುಪಿಗೆ ಸಾಗುತ್ತಿತ್ತು ಎನ್ನಲಾಗಿದೆ. ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಪರಿಣಾಮ ಮಹಾರಾಷ್ಟ್ರ ಮೂಲದ ಚಾಲಕ ಅರುಣ್ ಶೇಖ್ (57) ಗಂಭೀರವಾಗಿ ಗಾಯಗೊಂಡಿದ್ದು,ಅವರು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ಯಾಂಕರ್‌ನಿಂದ ಮಿಥೆನ್ ಸೊರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಘಟನಾ ಸ್ಥಳದಲ್ಲಿ ತುರ್ತು ನಿರ್ಭಂಧ ಹೇರಿದ್ದಾರೆ.
ಘಟನೆ ಸಂಭವಿಸಿದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಸಿಬ್ಬಂಧಿಗಳು ಹಾಗೂ ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರು ಹಾಗೂ ವಾಹನಗಳ ಓಡಾಟ, ವಾಹನಗಳ ನಿಲುಗಡೆ ನಿರ್ಬಂಧಿಸಿ ಆದೇಶಿಸಿದ್ದಾರೆ. ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.