ಬೆಂಗಳೂರು: ಅಭಿವೃದ್ಧಿ ಕಾರ್ಯಗಳ ಕುರಿತು ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಜಟಾಪಟಿ ನಡೆಯುವುದು ಸಾಮಾನ್ಯ ಆದರೆ, ಮೂಲಸೌಕರ್ಯ ಕಾಮಗಾರಿ ವಿಳಂಬ ಕುರಿತು ನಗರದಲ್ಲಿ ಸ್ಥಳೀಯ ಶಾಸಕರು ಹಾಗೂ ಗುತ್ತಿಗೆದಾರರ ನಡುವೆ ಜಟಾಜಟಿ ಶುರುವಾಗಿದ್ದು, ಇದು ಹಲವರ ಹುಬ್ಬೇರುವಂತೆ ಮಾಡಿದೆ.
ಶಿವಾಜಿನಗರದಿಂದ ರಾಜಾಜಿನಗರ, ರಾಜಾಜಿನಗರದಿಂದ ಯಶವಂತಪುರದವರೆಗಿನ ಶಾಸಕರು ಗುತ್ತಿಗೆದಾರರ ಕಾಮಗಾರಿ ಕುರಿತು ಆಕ್ರೋಶ ಹೊರಹಾಕುತ್ತಿದ್ದಾರೆ.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರೂ ಕೂಡ ಗುತ್ತಿಗೆದಾರರ ವಿರುದ್ಧ ಅಸಮಾಧ ವ್ಯಕ್ತಪಡಿಸಿದ್ದಾರೆ. ನಾರಾಯಣ ಪಿಳ್ಳೈ ಸ್ಟ್ರೀಟ್ ಸೇಂಟ್ ಜಾನ್ಸ್ ರಸ್ತೆ, ಕೋಲ್ಸ್ ಪಾರ್ಕ್ ಮತ್ತು ಕಮರ್ಷಿಯಲ್ ಸ್ಟ್ರೀಟ್ ನಡುವಿನ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕೆಲಸವನ್ನು ನಿರ್ವಹಿಸುವ ಗುತ್ತಿಗೆದಾರರು ಕಾಮಗಾರಿಯನ್ನು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುತ್ತಿದೆ. ನಗರದಲ್ಲಿ ಮೂಲಸೌದರ್ಯ ಕಾಮಗಾರಿ ವಿಳಂಬಕ್ಕೆ ಅನೇಕ ಗುತ್ತಿಗೆದಾರರೇ ಮೂಲ ಕಾರಣ ಎಂದು ಆರೋಪಿಸಿದ್ದಾರೆ.
ಈ ನಡುವೆ ರಾಜಾಜಿನಗರದಲ್ಲಿ, ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ವೈಟ್-ಟಾಪಿಂಗ್ ಕಾಮಗಾರಿ ಕುರಿತಂತೆಯೂ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರಸ್ತೆ ಬೆಂಗಳೂರನ್ನು ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕಕ್ಕೆ ಸಂಪರ್ಕಿಸುತ್ತದೆ. ಸುಮಾರು 4,000 ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಸಾವಿರಾರು ಇತರ ವಾಹನಗಳು ಈ ರಸ್ತೆಯನ್ನು ಪ್ರತಿದಿನ ಬಳಸುತ್ತವೆ. ಈ ಗುತ್ತಿಗೆಯನ್ನು ಓಷನ್ ಕನ್‌ಸ್ಟ್ರಕ್ಷನ್ಸ್‌ಗೆ ವಹಿಸಲಾಗಿದೆ. ಆದರೆ, ಅವರಿಗೆ ಈ ರೀತಿಯ ಕಾಮಗಾರಿ ನಡೆಸಿರುವ ಹಿನ್ನೆಲೆಯೇ ಇಲ್ಲ ಈ ಸಮಸ್ಯೆಯನ್ನು ಗ್ರೇಟರ್ ಬೆಂಗಳೂರು ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ಇದೀಗ ಹೆಚ್ಚುವರಿ ಆಯುಕ್ತರೊಂದಿಗೆ ಸಭೆ ನಿಗದಿಪಡಿಸಲಾಗಿದೆ. ಇನ್ನೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಧರಣಿ ಕುಳಿತುಕೊಳ್ಳಬೇಕಾಗಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರೂ ಕೂಡ ಇದೇ ರೀತಿಯ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದಾರೆ. ಮೈಲಸಂದ್ರ ಮುಖ್ಯ ರಸ್ತೆ ಮತ್ತು ಕೋಡಿಪಾಳ್ಯ ಮುಖ್ಯ ರಸ್ತೆಯ ಎರಡು ಪ್ರಮುಖ ರಸ್ತೆಗಳ ಕೆಲಸವು ಹಿದಾಯತುಲ್ಲಾ ಎಂಬ ಗುತ್ತಿಗೆದಾರರಿಗೆ 50 ಕೋಟಿ ರೂ.ಗಳ ಗುತ್ತಿಗೆ ನೀಡಿದ್ದರೂ ಸುಮಾರು ಎರಡು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಪದೇ ಪದೇ ನೆನಪಿಸಿದರೂ ಯಾವುದೇ ಪ್ರಗತಿಯಾಗಿಲ್ಲ.
ಈ ವಿಷಯವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್'ಗಳ ಗಮನಕ್ಕೂ ತರಲಾಗಿದ್ದು, ಅವರು ಅಧಿಕಾರಿಗಳಿಗೆ ಕೆಲಸವನ್ನು ಮುಂದುವರಿಸಲು ಸೂಚನೆ ನೀಡಿದ್ದಾರೆ. ಆದರೊ ಯಾವುದೇ ಕ್ರಮ ಕೈಗೊಂಡಿಲ್ಲ, ಇದೀಗ ಧರಣಿ ನಡೆಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.