ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 28ನೇ ಆವೃತ್ತಿಯ ಏಷ್ಯಾದ ಅತಿದೊಡ್ಡ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಸಿಎಂ, ಕರ್ನಾಟಕವು ತಂತ್ರಜ್ಞಾನದ ಶಕ್ತಿ ಕೇಂದ್ರವಾಗಿ ಉದಯಿಸಿ ಹೊರಹೊಮ್ಮುತ್ತಿರುವುದು ಆಕಸ್ಮಿಕವಲ್ಲ, ಅದು ನಮ್ಮ ಸರ್ಕಾರದ ದೂರದೃಷ್ಟಿಯ ನೀತಿಗಳು, ಆಳವಾದ ಸಾಂಸ್ಥಿಕ ಶಕ್ತಿ ಮತ್ತು ಪ್ರತಿ ಹಂತದಲ್ಲೂ ಸೃಜನಶೀಲತೆ ಮತ್ತು ಶ್ರೇಷ್ಠತೆಯನ್ನು ಪೋಷಿಸುವ ಪರಿಸರ ವ್ಯವಸ್ಥೆಯ ಪರಿಣಾಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಈ ವೇಳೆ ಪ್ರತಿಪಾದಿಸಿದ್ದಾರೆ. ಇದೇ ವೇಳೆ 18,999 ರೂ. ಬೆಲೆಯ AI ರೆಡಿ ಕಾಂಪ್ಯಾಕ್ಟ್ ಪರ್ಸನಲ್ ಕಂಪ್ಯೂಟರ್ KEO ಅನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಇದನ್ನು ಸಂಪೂರ್ಣವಾಗಿ ರಾಜ್ಯದೊಳಗೆ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಸುಮಾರು 60 ದೇಶಗಳ ಪ್ರತಿನಿಧಿಗಳು ಟೆಕ್ ಸಮ್ಮಿಟ್ ನಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 20 ರಂದು ನಡೆಯಲಿರುವ ಭವಿಷ್ಯದ ತಯಾರಕರ ಸಮಾವೇಶದಲ್ಲಿ ಸುಮಾರು 16 ಖಾಸಗಿ ಉದ್ಯಮ ಬಂಡವಾಳಶಾಹಿಗಳು 25 ನವೋದ್ಯಮಗಳಲ್ಲಿ 430 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ. ನವೋದ್ಯಮಗಳಿಗೆ 2 ಕೋಟಿಯಿಂದ 45 ಕೋಟಿ ರೂ.ವರೆಗೆ ಹಣಕಾಸು ಲಭ್ಯವಾಗಲಿದೆ ಎಂದು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಸಿದ್ದರಾಮಯ್ಯ ಕರ್ನಾಟಕವನ್ನು ನಾವೀನ್ಯತೆ ಮತ್ತು ಆಳವಾದ ತಂತ್ರಜ್ಞಾನ ಪರಿಹಾರಗಳಿಗಾಗಿ ಜಾಗತಿಕ ತಾಣವಾಗಿ ಪರಿವರ್ತಿಸಲು ಮೂರು ಪ್ರಮುಖ ನೀತಿಗಳಾದ ಮಾಹಿತಿ ತಂತ್ರಜ್ಞಾನ ನೀತಿ, ಬಾಹ್ಯಾಕಾಶ ತಂತ್ರಜ್ಞಾನ ನೀತಿ ಮತ್ತು ಸ್ಟಾರ್ಟ್ಅಪ್ ನೀತಿ ಅನಾವರಣಗೊಳಿಸಿದರು. ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ ಬಿಲಿಯನ್ ಡಾಲರ್ ಗಟ್ಟಲೆ ಬಂಡವಾಳ ಹೂಡಿಕೆ ಮಾಡಲು ನಾನಾ ದೇಶದ ಉದ್ಯಮಿಗಳು ಮುಂದೆ ಬಂದಿದ್ದಾರೆ. ಹೀಗಾಗಿ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿಯಲ್ಲಿ ನೂತನ ಐಟಿ ಸಿಟಿ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದರು. ಬೆಂಗಳೂರು 'ನಿರಂತರವಾಗಿ ವಿಕಸನಗೊಳ್ಳುತ್ತಿರುವ ಪರಿವರ್ತನೆಯ ಎಂಜಿನ್' ಎಂದು ಬಣ್ಣಿಸಿರುವ ಡಿಸಿಎಂ, ರಾಜ್ಯ ಸರ್ಕಾರವು 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡುವ ಮೂಲಕ ನಗರದ ಮೂಲಸೌಕರ್ಯವನ್ನು ಸುಧಾರಿಸುತ್ತಿದೆ ಎಂದು ಹೇಳಿದರು.
ಸೌದಿ ಅರೇಬಿಯಾದ ಮದೀನಾ ಬಳಿ ತೈಲ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ 45 ಭಾರತೀಯ ಹಜ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು ಅವರಲ್ಲಿ ರಾಜ್ಯದ ಇಬ್ಬರು ಸೇರಿದ್ದಾರೆ. ಬೀದರ್ ಮೂಲದ ಮಹಿಳೆ 80 ವರ್ಷದ ರೆಹಮತ್ ಬಿ ಮೃತಪಟ್ಟಿದ್ದಾರೆಂದು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಧೃಡಪಡಿಸಿದ್ದಾರೆ. ಇನ್ನು ಹುಬ್ಬಳ್ಳಿ ಮೂಲದ ಅಬ್ದುಲ್ ಘನಿ ಎಂಬವರು ಇದೇ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುಬೈನ ಇಂಟರ್ ನ್ಯಾಷನಲ್ ಹೋಟೆಲ್ ವೊಂದರಲ್ಲಿ ಅಬ್ದುಲ್ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಹುಬ್ಬಳ್ಳಿಗೆ ಬಂದಿದ್ದ ಅಬ್ದುಲ್ ನ.9ರಂದು ದುಬೈನಿಂದ ಸೌದಿಗೆ ತೆರಳಿದ್ದರು. ತೆಲಂಗಾಣ ಸರ್ಕಾರ ಮೃತರ ಸಂಬಂಧಿಕರನ್ನು ಸೌದಿಗೆ ಕರೆದೊಯ್ದಿದ್ದು ಅಲ್ಲೇ ಅವರ ಅಂತಿಮ ಕ್ರಿಯೆಗಳು ನಡೆಯುವ ಸಾಧ್ಯತೆ ಇದೆ.
ನವೆಂಬರ್ 13 ರಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ ಆರೋಪದ ಮೇಲೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ಮಂಗಳವಾರ 57 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ತನ್ನ ವಿಚ್ಛೇದಿತ ಪತ್ನಿಗೆ ಡ್ಯೂಟಿ ನಂತರ ಮಾನಸಿಕ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ವ್ಯಕ್ತಿ ಇ-ಮೇಲ್ ಕಳುಹಿಸಿದ್ದನು. ನಾನು ಭಯೋತ್ಪಾದಕ, ಅದರಲ್ಲೂ ಕನ್ನಡಿಗರ ವಿರುದ್ಧ ಎಂದು ಬೆದರಿಕೆ ಹಾಕಿದ್ದನು. ಆರೋಪಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ ತಿಂಗಳು ಮೈಸೂರಿನ ಮುಳ್ಳೂರು ಗ್ರಾಮ ಪಂಚಾಯತ್‌ನಲ್ಲಿ ರೈತನೊಬ್ಬನನ್ನು ಕೊಂದು ಹಲವಾರು ಇತರ ದಾಳಿಗಳಿಗೆ ಕಾರಣವಾಗಿದ್ದ ಹುಲಿಯನ್ನು ತೀವ್ರ ಶೋಧ ಮತ್ತು ಕಾರ್ಯಾಚರಣೆ ಬಳಿಕ ಅರಣ್ಯಾಧಿಕಾರಿಗಳು ಇಂದು ಮುಂಜಾನೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ರೈತನನ್ನು ಬಲಿ ಪಡೆದಿದ್ದ ಹುಲಿಯು ನಂತರ ಎರಡು ದನಗಳನ್ನೂ ಬೇಟೆಯಾಡಿತ್ತು. ಇದರ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಬಳಿಕ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆಯು ಒಟ್ಟು 11 ಹುಲಿ ಹಾಗೂ ಅದರ ಮರಿಗಳನ್ನು ಸೆರೆಹಿಡಿದಿತ್ತು. ಆದರೆ, ರೈತನ್ನು ಬಲಿ ಪಡೆದಿದ್ದ ಹುಲಿ ಮಾತ್ರ ಸೆರೆ ಸಿಕ್ಕಿರಲಿಲ್ಲ.