ಮಂಗಳೂರು: ಶಿವಮೊಗ್ಗ ಜೈಲಿನಲ್ಲಿರುವ ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಸಾಕ್ಷಿ, ದೂರುದಾರ 45 ವರ್ಷದ ಚಿನ್ನಯ್ಯನಿಗೆ ಸೋಮವಾರ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ತನಿಖಾ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ ಬೆನ್ನಲ್ಲೇ ಚಿನ್ನಯ್ಯ ಜಾಮೀನಿ ಕೋರಿ ಅರ್ಜಿ ಸಲ್ಲಿಸಿದ್ದರು.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಇಬ್ಬರು ಶ್ಯೂರಿಟಿಗಳೊಂದಿಗೆ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲು ಆದೇಶಿಸಿದೆ.
ಆರೋಪಿ ಇದೇ ರೀತಿಯ ಅಪರಾಧವನ್ನು ಮತ್ತೆ ಮಾಡಬಾರದು ಮತ್ತು ಪರಾರಿಯಾಗಬಾರದು, ಬೆದರಿಕೆ, ಪ್ರಚೋದನೆಗಳ ಮೂಲಕ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಹಾಳು ಮಾಡಬಾರದು ಮತ್ತು ಪ್ರಾಸಿಕ್ಯೂಷನ್ ಸಾಕ್ಷ್ಯಗಳನ್ನು ನಾಶಪಡಿಸಬಾರದು ಎಂಬ ಷರತ್ತುಗಳನ್ನು ಕೋರ್ಟ್ ವಿಧಿಸಿದೆ. ಅಲ್ಲದೆ, ಆರೋಪಿ ತನಿಖಾ ಅಧಿಕಾರಿಗೆ ಲಭ್ಯವಾಗಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದೆ.
ಪೂರ್ವಾನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ಹೋಗಬಾರದು ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 39/2025 ಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಂದರ್ಶನ/ಹೇಳಿಕೆಯನ್ನು ಸಾಮಾಜಿಕ ಮಾಧ್ಯಮ ಅಥವಾ ಟಿವಿ ಚಾನೆಲ್‌ಗಳು ಅಥವಾ ಪತ್ರಿಕೆಗಳ ಮುಂದೆ ನೀಡಬಾರದು ಎಂದು ನ್ಯಾಯಾಲಯವು ಆರೋಪಿಗೆ ಸೂಚಿಸಿದೆ. ಅಲ್ಲದೆ, ಬಿಡುಗಡೆಯಾದ ದಿನಾಂಕದಿಂದ ಅಂತಿಮ ವರದಿಯನ್ನು ಸಲ್ಲಿಸುವವರೆಗೆ ಪರ್ಯಾಯ ದಿನಗಳಲ್ಲಿ ಅವರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡಬೇಕು.
ಆಗಸ್ಟ್ 23 ರಂದು ಸುಧೀರ್ಘ ವಿಚಾರಣೆ ಬಳಿಕ ಬುರುಡೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಅನಾಮಿಕ ದೂರುದಾರ ಚಿನ್ನಯ್ಯ ಬಂಧನವಾಗಿತ್ತು. ಸೆಪ್ಟೆಂಬರ್ 6 ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ಕರೆತರಲಾಗಿತ್ತು.
ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಒಂದು ದಶಕದ ಹಿಂದೆ ನಡೆದ ಅತ್ಯಾಚಾರ ಮತ್ತು ಕೊಲೆಯಾದವರ ಶವಗಳನ್ನು ಹೂಳಲು ತನಗೆ ಸೂಚಿಸಲಾಗಿತ್ತು ಎಂದು ಚಿನ್ನಯ್ಯ ಹೇಳಿದ್ದರು. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಪ್ರಕಣದ ತನಿಖೆಗೆ ಡಿಜಿಪಿ ಪ್ರಣಬ್ ಮೊಹಂತಿ ಅವರ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಯಿತು.