ದಾವಣಗೆರೆ: ಆಭರಣ ವ್ಯಾಪಾರಿಯೊಬ್ಬರನ್ನು ಬೆದರಿಸಿ ಚಿನ್ನ ದೋಚಿದ್ದ ಆರೋಪದ ಮೇಲೆ ಇಬ್ಬರು ಸಬ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಂಧಿತ ಇಬ್ಬರು ಅಧಿಕಾರಿಗಳನ್ನು ಮಾಳಪ್ಪ ಚಿಪ್ಪಲಕಟ್ಟೆ ಮತ್ತು ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ.
'ವ್ಯಕ್ತಿಯೊಬ್ಬರನ್ನು ಬೆದರಿಸಿ ಚಿನ್ನವನ್ನು ದೋಚಿದ ಆರೋಪದ ಮೇಲೆ ನಾವು ನಿನ್ನೆ ಇಬ್ಬರೂ ಅಧಿಕಾರಿಗಳನ್ನು ಬಂಧಿಸಿದ್ದೇವೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ದೂರಿನ ಪ್ರಕಾರ, ಇತ್ತೀಚೆಗೆ ಹಾವೇರಿ ಜಿಲ್ಲೆಯಿಂದ ದಾವಣಗೆರೆಯ ಪೂರ್ವ ವಲಯ ಕಚೇರಿಗೆ ವರ್ಗಾವಣೆಗೊಂಡ ಇಬ್ಬರು ಸಬ್-ಇನ್ಸ್‌ಪೆಕ್ಟರ್‌ಗಳು, ಚಿನ್ನದ ವ್ಯಾಪಾರಿಗಳಿಂದ ಸಂಗ್ರಹಿಸಿದ 76 ಗ್ರಾಂ ಚಿನ್ನದ ಗಟ್ಟಿ ಮತ್ತು 2.15 ಗ್ರಾಂ ಉಂಗುರದೊಂದಿಗೆ ದಾವಣಗೆರೆಯಿಂದ ಹಿಂತಿರುಗುತ್ತಿದ್ದ ವೇಳೆ ಕಾರವಾರದ ಆಭರಣ ತಯಾರಕ ವಿಶ್ವನಾಥ ಅರಕಸಾಲಿ ಅವರನ್ನು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಳಗ್ಗೆ 12.30ರ ಸುಮಾರಿಗೆ ವಿಶ್ವನಾಥ್ ಇಲ್ಲಿನ ಬಸ್ ನಿಲ್ದಾಣಕ್ಕೆ ಬಂದಾಗ, ಸಬ್-ಇನ್ಸ್‌ಪೆಕ್ಟರ್‌ಗಳು ಅವರನ್ನು ಹಿಂಬಾಲಿಸಿ, ಕಾಲರ್ ಹಿಡಿದು ತಮ್ಮ ಪೊಲೀಸ್ ಐಡಿಗಳನ್ನು ತೋರಿಸಿದ್ದಾರೆ. ಬಸ್ ನಿಲ್ದಾಣದ ಹೊರಗೆ ನಿಲ್ಲಿಸಿದ್ದ ಪೊಲೀಸ್ ಜೀಪಿನಲ್ಲಿ ಅವರನ್ನು ಕೂರಿಸಿಕೊಂಡು, ಕೆಟಿಜೆ ನಗರ ಪೊಲೀಸ್ ಠಾಣೆಯ ಕಡೆಗೆ ಕರೆದೊಯ್ದಿದ್ದಾರೆ. ನಂತರ ಖಾಸಗಿ ಕಾರಿನಲ್ಲಿ ಕೂರಿಸಿಕೊಂಡು ಚಿನ್ನವನ್ನು ತಮಗೆ ನೀಡದ ಹೊರತು ಅವರನ್ನು ಬಿಡುಗಡೆ ಮಾಡುವುದಿಲ್ಲ ಎಂದು 'ಬೆದರಿಕೆ' ಹಾಕಿದ್ದಾರೆ ಎನ್ನಲಾಗಿದೆ.
ಅವರನ್ನು ದಾವಣಗೆರೆ ಬಸ್ ನಿಲ್ದಾಣದಲ್ಲಿ ಇಳಿಸುವ ಮುನ್ನ ಅವರ ಬಳಿಯಿದ್ದ ಚಿನ್ನದ ಗಟ್ಟಿ ಮತ್ತು ಉಂಗುರವನ್ನು ಕಸಿದುಕೊಂಡರು ಎಂದು ಆರೋಪಿಸಲಾಗಿದೆ. ವಿಶ್ವನಾಥ್ ದಾವಣಗೆರೆಗೆ ಹಿಂತಿರುಗಿ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಾಹಿತಿ ನೀಡಿದ ಮತ್ತು ಅಪರಾಧಕ್ಕೆ ಸಹಾಯ ಮಾಡಿದ ಆರೋಪದ ಮೇಲೆ ವಿನಾಯಕ ನಗರದ ಸತೀಶ್ ರೇವಣ್ಣನವರ್ ಮತ್ತು ಶಿರಸಿಯ ನಾಗರಾಜ ರೇವಾಲ್ಕರ್ ಎಂಬುವವರ ಜೊತೆಗೆ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ ಬಳಸಲಾದ ಕಾರು ಮತ್ತು ನಕಲಿ ಬಂದೂಕನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.