ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಫೈಟ್ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಿಎಂ ಸಿದ್ದರಾಮಯ್ಯ ಬಣದ ತಂತ್ರ ಒಂದು ಕಡೆಯಾದರೆ ಡಿಸಿಎಂ ಡಿಕೆ ಶಿವಕುಮಾರ್ ಬಣವೂ ಪ್ರತಿತಂತ್ರ ರೂಪಿಸುತ್ತಿದೆ. ಈ ಮಧ್ಯೆ ಡಿ.ಕೆ ಶಿವಕುಮಾರ್ ಇಂದು ಸ್ಫೋಟಕ ಹೇಳಿಕೆ ನೀಡಿದ್ದು, ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತಾ ನಾನು ಕೇಳಿಯೇ ಇಲ್ಲ ಎಂದಿದ್ದಾರೆ. ಸಿಎಂ ಬದಲಾವಣೆ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸಲು ನಾನು ಬಯಸುವುದಿಲ್ಲ. ಏಕೆಂದರೆ ಇದು ಪಕ್ಷದಲ್ಲಿ ನಾಲ್ಕರಿಂದ ಐದು ಜನರ ನಡುವೆ ನಡೆದ ರಹಸ್ಯ ಒಪ್ಪಂದವಾಗಿದೆ ಎಂದರು. ಈ ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ, ರಹಸ್ಯವಾಗಿಯೇ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದರು. ರಾಜ್ಯ ಕಾಂಗ್ರೆಸ್ನಲ್ಲಾಗುತ್ತಿರುವ ವಿದ್ಯಮಾನಗಳ ಬಗ್ಗೆ ವಿವರಿಸಿದ್ದರು. ಇನ್ನು ರಾಹುಲ್ ಸಂದೇಶ ಹೊತ್ತು ತಂದಿರುವ ಪ್ರಿಯಾಂಕ್ ಖರ್ಗೆ ನಂತರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು. ಇದಕ್ಕೂ ಮುನ್ನ, ರಾಜ್ಯದಲ್ಲಿ ಉಂಟಾಗಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಚಿವ ಸಂಪುಟ ವಿಸ್ತರಣೆಯನ್ನು ಪಕ್ಷದ ವರಿಷ್ಠರು ಸೂಚನೆ ನೀಡಿದಾಗ ಕೈಗೊಳ್ಳಲಾಗುವುದು. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಇರಾದೆ ಸದ್ಯಕ್ಕೆ ಇಲ್ಲ ಎಂದು ಸಿಎಂ ತಿಳಿಸಿದರು.
ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಆಟಗಾರ್ತಿಯರನ್ನು ಅಭಿನಂದಿಸಿ ಸನ್ಮಾನಿಸಿದರು. ಇದೇ ವೇಳೆ, ಕರ್ನಾಟಕದ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗವನ್ನು ಸಿದ್ದರಾಮಯ್ಯ ಘೋಷಿಸಿದರು. ಇತರೆ ರಾಜ್ಯಗಳ ಆಟಗಾರ್ತಿಯರಿಗೂ ತಲಾ 2 ಲಕ್ಷ ನಗದು ಬಹುಮಾನವನ್ನು ಸಿದ್ದರಾಮಯ್ಯ ಘೋಷಿಸಿರುವುದರಿಂದ ತಂಡದಲ್ಲಿ ಇತರ 13 ಆಟಗಾರ್ತಿಯರಿಗೂ ನಗದು ಬಹುಮಾನ ಸಿಗಲಿದೆ. ಭಾರತ ತಂಡದ ನಾಯಕಿ, ತುಮಕೂರಿನ ಶಿರಾ ಮೂಲದ ದೀಪಿಕಾ ನಾಯಕತ್ವದಲ್ಲಿ ಭಾರತ ತಂಡ ಫೈನಲ್ ಪಂದ್ಯದಲ್ಲಿ ನೇಪಾಳವನ್ನು 7 ವಿಕೆಟ್ ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದ್ದು ಚೊಚ್ಚಲ ವಿಶ್ವಕಪ್ ಗೆದ್ದಿತ್ತು.
ರಾಜ್ಯ ಸರ್ಕಾರ ಖರೀದಿ ಭರವಸೆ ನೀಡಿದ ಬೆನ್ನಲ್ಲೇ ನವಲಗುಂದದಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಮೆಕ್ಕೆಜೋಳ ರೈತರು ಅಂತ್ಯಗೊಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ನವಲಗುಂದ ಪಟ್ಟಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳ ಖರೀದಿಗೆ ಅಗ್ರಹಿಸಿ ರೈತರು ನಡೆಸುತ್ತಿದ್ದ ಧರಣಿ, ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಎನ್.ಎಚ್ ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ಕೇಂದ್ರ ಸರ್ಕಾರದ ಅನುಮತಿಯನ್ನು ಲೆಕ್ಕಿಸದೆ ರಾಜ್ಯ ಸರ್ಕಾರ ರೈತರ ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದ್ದು, ಖರೀದಿ ಕೇಂದ್ರಗಳ ತೆರೆಯುವಲ್ಲಿನ ವಿಳಂಬಕ್ಕೆ ತಾಂತ್ರಿಕ ಕಾರಣಗಳ ಬಗ್ಗೆ ತಿಳಿಸಿದ್ದರು.
ಆಭರಣ ವ್ಯಾಪಾರಿಯೊಬ್ಬರನ್ನು ಬೆದರಿಸಿ ಚಿನ್ನ ದೋಚಿದ್ದ ಆರೋಪದ ಮೇಲೆ ದಾವಣಗೆರೆಯ ಇಬ್ಬರು ಸಬ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಮಾಳಪ್ಪ ಚಿಪ್ಪಲಕಟ್ಟೆ ಮತ್ತು ಪ್ರವೀಣ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ವ್ಯಕ್ತಿಯೊಬ್ಬರನ್ನು ಬೆದರಿಸಿ ಚಿನ್ನವನ್ನು ದೋಚಿದ ಆರೋಪದ ಮೇಲೆ ಇಬ್ಬರೂ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾವೇರಿ ಜಿಲ್ಲೆಯಿಂದ ದಾವಣಗೆರೆಯ ಪೂರ್ವ ವಲಯ ಕಚೇರಿಗೆ ವರ್ಗಾವಣೆಗೊಂಡ ಇಬ್ಬರು ಸಬ್-ಇನ್ಸ್‌ಪೆಕ್ಟರ್‌ಗಳು, ಚಿನ್ನದ ವ್ಯಾಪಾರಿಗಳಿಂದ ಸಂಗ್ರಹಿಸಿದ 76 ಗ್ರಾಂ ಚಿನ್ನದ ಗಟ್ಟಿ ಮತ್ತು 2.15 ಗ್ರಾಂ ಉಂಗುರದೊಂದಿಗೆ ದಾವಣಗೆರೆಯಿಂದ ಹಿಂತಿರುಗುತ್ತಿದ್ದ ವೇಳೆ ಕಾರವಾರದ ಆಭರಣ ತಯಾರಕ ವಿಶ್ವನಾಥ ಅರಕಸಾಲಿ ಅವರನ್ನು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ.