ಉಡುಪಿ: ಕೃಷ್ಣಾನೂರು ಉಡುಪಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು, ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಹಮ್ಮಿಕೊಂಡಿರುವ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಿಸಿದ್ದಾರೆ.
ಕೃಷ್ಣಮಠಕ್ಕೆ ಭೇಟಿ ನೀಡಿದ ನಂತರ ಸಭಾಂಗಣಕ್ಕೆ ಆಗಮಿಸಿದ ಮೋದಿಯವರಿಗೆ ಜಗದ್ಗುರು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸನ್ಮಾನಿಸಿದರು.
ನಂತರ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಭಾಗಿಯಾದ ಮೋದಿಯವರು, ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಸಚಿವ ಬೈರತಿ ಸುರೇಶ್, ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಇತರರು ವೇದಿಕೆಯಲ್ಲಿದ್ದಾರೆ.
ಉಡುಪಿ-ಬನ್ನಂಜೆಯ ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರು ಸರ್ಕಲ್ನಿಂದ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಅವರಿಗೆ ಪುಷ್ಪವೃಷ್ಟಿ ಸ್ವಾಗತ ಕೋರಲಾಯಿತು.
ರಸ್ತೆ ಬದಿ ಕಾದು ನಿಂತು ಪ್ರಧಾನಿ ಅವರನ್ನು ಸಾರ್ವಜನಿಕರು ಸ್ವಾಗತಿಸಿದರು. ರೋಡ್ ಶೋ ಮೂಲಕ ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ಆಗಮಿಸಿದರು.
ಬಳಿಕ ಸ್ವರ್ಣಲೇಪಿತ ಕನಕನ ಕಿಂಡಿಯನ್ನು ಪ್ರಧಾನಿ ಮೋದಿಯವರು ಅನಾವರಣಗೊಳಿಸಿದರು. ಬಳಿಕ ಕನಕನ ಕಿಂಡಿಯಿಂದ ಉಡುಪಿ ಕೃಷ್ಣನನ್ನು ಕಣ್ತುಂಬಿಕೊಂಡರು. ನಂತರ ಕೃಷ್ಣ ಮಠದ ಎದುರಲ್ಲಿರುವ ಮಧ್ವ ಸರೋವರಕ್ಕೆ ಭೇಟಿ ನೀಡಿ, ತೀರ್ಥ ಸಂಪ್ರೋಕ್ಷಣೆ ಮಾಡಿದರು. ಅಲ್ಲಿಂದ ಜನರತ್ತ ಕೈ ಬೀಸುತ್ತ ಶ್ರೀ ಕೃಷ್ಣ ಮಠ ಪ್ರವೇಶ ಮಾಡಿದರು. ಈ ವೇಳೆ ಪ್ರಧಾನಿಯವರಿಗೆ ಭವ್ಯ ಸ್ವಾಗತ ಕೋರಲಾಯಿತು.
ಮೋದಿಯವರು ಕೃಷ್ಣ ಮಠದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಪೂರ್ಣ ಕುಂಭ ಸ್ವಾಗತ (ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತ) ನೀಡಲಾಯಿತು.
ಮೋದಿಯವರಿಗೆ ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ಒಳಗೊಂಡಿರುವ ಬೆಳ್ಳಿ ಹೊದಿಕೆಯ ತುಳಸಿ ಜಪ ಮಾಲೆ ಮತ್ತು ಮುದ್ರೆಗಳನ್ನು ನೀಡಲಾಯಿತು, (ಇದನ್ನು ಮಾಧ್ವರು ಮತ್ತು ಬ್ರಾಹ್ಮಣ ಸಮುದಾಯಗಳು ದಕ್ಷಿಣ ಭಾರತದಲ್ಲಿ ತಮ್ಮ ದೈನಂದಿನ ಪೂಜಾ ವಿಧಿಗಳಿಗಾಗಿ ಬಳಸುತ್ತಾರೆ).
ಬಳಿಕ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 15ನೇ ಅಧ್ಯಾಯದ ಕೆಲವು ಶ್ಲೋಕಗಳನ್ನು ಪಠಿಸಿದರು.
ಸುಗುಣೇಂದ್ರ ತೀರ್ಥ, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮತ್ತು ಇತರರ ಜೊತೆಯಲ್ಲಿ, ಪ್ರಧಾನಿ ಮೋದಿ ಸಾಮೂಹಿಕ ಪಠಣದಲ್ಲಿ ಭಾಗವಹಿಸಿ ಶ್ಲೋಕಗಳನ್ನು ಪಠಿಸಿದರು.