ಬೆಂಗಳೂರು: ರಾಜ್ಯದ ಮಲ್ಟಿಪ್ಲೆಕ್ಸ್‌ಗಳಲ್ಲಿನ ಚಲನಚಿತ್ರ ಪ್ರದರ್ಶನದ ಟಿಕೆಟ್ ಮೇಲೆ ವಿಧಿಸಿದ್ದ.200 ಮಿತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಸಿನಿಮಾ ವೀಕ್ಷಿಸುವವರು ತಮ್ಮ ಟಿಕೆಟ್ ಮತ್ತು ಹಣ ಪಾವತಿಸಿದ ದಾಖಲೆಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳುವಂತೆ ಚಿತ್ರ ವೀಕ್ಷಕರಿಗೆ ರಾಜ್ಯ ಸರ್ಕಾರ ಸೂಚಿಸಿದೆ.
ಚಲನಚಿತ್ರ ವೀಕ್ಷಣೆಗೆ ದುಬಾರಿ ಟಿಕೆಟ್ ದರ ನಿಗದಿ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳ ವೀಕ್ಷಣೆಯ ಟಿಕೆಟ್ ದರವನ್ನು ಗರಿಷ್ಠ 200 ರೂ. ಮಿತಿಗೊಳಿಸಿ ಆದೇಶಿಸಿದೆ. ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಅದರ ಜೊತೆಗೆ ಮಲಿಪ್ಲೆಕ್ ಗಳು ಮಾರಾಟವಾದ ಪ್ರತಿ ಟಿಕೆಟ್‌ಗೆ ಸಮಗ್ರ ಮತ್ತು ಲೆಕ್ಕ ಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸುವಂತೆ ನಿರ್ದೇಶಿಸಿದೆ.
ಒಂದು ವೇಳೆ ಭಾರತೀಯ ಮಲ್ಟಿಪ್ಲೆಕ್ಸ್‌ಗಳ ಸಂಘ ಮತ್ತು ಇತರರು ರಾಜ್ಯ ಸರ್ಕಾರ ನಿಗದಿಪಡಿಸಿದ ಮಿತಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿ, ರಾಜ್ಯ ಸರ್ಕಾರದ ಪರ ತೀರ್ಪು ಬಂದರೆ, ಮಲ್ಟಿಪ್ಲೆಕ್ಸ್ ಗಳು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಟಿಕೆಟ್ ಗಳನ್ನು ಬುಕ್ ಮಾಡಿದ ಗ್ರಾಹಕರಿಗೆ ಬುಕ್ಕಿಂಗ್‌ಗೆ ಬಳಸಿದ ಪಾವತಿ ವಿಧಾನದ ಮೂಲಕವೇ ಮರುಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.