TJS ಜಾರ್ಜ್ ನಿಧನಕ್ಕೆ ಗಣ್ಯರ ಸಂತಾಪ 
ರಾಜ್ಯ

ಬರವಣಿಗೆ ಮೂಲಕ ಸಂಪಾದಕೀಯದ ಘನತೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ದವರು ಜಾರ್ಜ್: ಡಿ.ಕೆ ಶಿವಕುಮಾರ್

ಟಿ.ಜೆ.ಎಸ್ ಜಾರ್ಜ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಗಿದೆ. ನನಗೆ ಬಹಳ ಆತ್ಮೀಯರಾಗಿದ್ದರು. ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಕೋನದ ಜೊತೆಗೆ ನೇರ, ದಿಟ್ಟ ಬರವಣಿಗೆ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಬೆಂಗಳೂರು: ಹಿರಿಯ ಪತ್ರಕರ್ತ, ಲೇಖಕ ಮತ್ತು ವಾಗ್ಮಿ, ಪದ್ಮಭೂಷಣ ಟಿಜೆಎಸ್ ಜಾರ್ಜ್ (97) ಶುಕ್ರವಾರ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜಾರ್ಜ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹಿರಿಯ ಪತ್ರಕರ್ತ ಟಿಜೆಎಸ್‌ ಜಾರ್ಜ್‌ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ನಿಧನದಿಂದ ಭಾರತೀಯ ಪತ್ರಿಕೋದ್ಯಮ ಬಡವವಾಗಿದೆ ಎಂದು ಹೇಳಿದ್ದಾರೆ.

ಹಿರಿಯ ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರ ಟಿ.ಜೆ.ಎಸ್ ಜಾರ್ಜ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಟಿ.ಜೆ.ಎಸ್ ಜಾರ್ಜ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಗಿದೆ. ನನಗೆ ಬಹಳ ಆತ್ಮೀಯರಾಗಿದ್ದರು. ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಕೋನದ ಜೊತೆಗೆ ನೇರ, ದಿಟ್ಟ ಬರವಣಿಗೆ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸುದೀರ್ಘ ಆರು ದಶಕಗಳ ಕಾಲ ತಮ್ಮ ಬರವಣಿಗೆ ಹಾಗೂ ಅಂಕಣಗಳ ಮೂಲಕ ಸತ್ಯಶೋಧನೆ ಮಾಡುತ್ತಿದ್ದ ಪತ್ರಕರ್ತರಾಗಿದ್ದರು ಎಂದು ಶಿವಕುಮಾರ್ ಅವರು ಬಣ್ಣಿಸಿದ್ದಾರೆ.

ಏಷ್ಯನ್ ವೀಕ್ ಮ್ಯಾಗಜೀನ್ ಸಂಸ್ಥಾಪಕ ಸಂಪಾದಕರಾಗಿದ್ದ ಜಾರ್ಜ್ ಅವರು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ತಮ್ಮ ಬರವಣಿಗೆ ಮೂಲಕ ಸಂಪಾದಕೀಯದ ಘನತೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ದವರು ಜಾರ್ಜ್. ಖ್ಯಾತ ಲೇಖಕರೂ ಆಗಿದ್ದ ಜಾರ್ಜ್ ಅವರು, ಎಂ.ಎಸ್ ಸುಬ್ಬಲಕ್ಷ್ಮಿ, ಎನ್.ಟಿ ರಾಮರಾವ್, ನರ್ಗಿಸ್ ಹಾಗೂ ಇತರ ಗಣ್ಯರ ಜೀವನಚರಿತ್ರೆ ರಚಿಸಿದ್ದರು. ಪತ್ರಿಕೋದ್ಯಮ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಅವರ ಅಗಲಿಕೆ ಪತ್ರಿಕೋದ್ಯಮಕ್ಕೆ ದೊಡ್ಡ ನಷ್ಟ. ತಮ್ಮ ಬರವಣಿಗೆಗಳ ಮೂಲಕ ಜಾರ್ಜ್ ಅವರು ಜೀವಂತವಾಗಿರಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಟಿಜೆಎಸ್‌ ಜಾರ್ಜ್‌ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, "ಹಿರಿಯ ಪತ್ರಕರ್ತರು, ಲೇಖಕರು ಆಗಿದ್ದ ಪದ್ಮಭೂಷಣ ಶ್ರೀ ಟಿ.ಜೆ.ಎಸ್. ಜಾರ್ಜ್ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವುಂಟಾಯಿತು" ಎಂದು ಕಂಬನಿ ಮಿಡಿದಿದ್ದಾರೆ.

"ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳ ಸಂಪಾದಕ, ಸಂಪಾದಕೀಯ ನಿರ್ದೇಶಕ, ಸಂಪಾದಕೀಯ ಸಲಹೆಗಾರ ಸೇರಿ ಅನೇಕ ಮಹತ್ವದ ಹೊಣೆಗಳನ್ನು ನಿರ್ವಹಿಸಿ 'ಅನುಭವದ ಸಮೃದ್ಧ ಗಣಿ'ಯೇ ಆಗಿದ್ದ ಶ್ರೀಯುತರು, The New Indian Express ಪತ್ರಿಕೆಯಲ್ಲಿ ಬರೆಯುತ್ತಿದ್ದ Point of View ಅಂಕಣವನ್ನು ನಿಕಟವಾಗಿ ಓದಿದ್ದೇನೆ. ಸಂಗೀತ ಸಾಮ್ರಾಜ್ಞಿ ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿ ಜೀವನ ಆಧರಿತ ಅವರ MS – A Life in Music ಕೃತಿಯನ್ನು ಓದಿ ಅವರ ಬರವಣಿಗೆಯ ಪ್ರತಿಭೆಗೆ ಮಾರು ಹೋಗಿದ್ದೆ. ಅಗಲಿದ ಹಿರಿಯ ಚೇತನಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳು, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹೆಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

"ಭಾರತೀಯ ಮಾಧ್ಯಮದಲ್ಲಿ ದೀರ್ಘಕಾಲೀನ ಸೇವೆಯ ಮೂಲಕ ಟಿಜೆಎಸ್ ಜಾರ್ಜ್ ಅವರು ತಮ್ಮ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡರು. ಅಂಕಣಕಾರರಾಗಿ, ಅವರು ರಾಜಕೀಯ ಘಟನೆಗಳನ್ನು ನಿರಂತರವಾಗಿ ವಿಶ್ಲೇಷಿಸಿದರು. ಸುಮಾರು 25 ವರ್ಷಗಳ ಕಾಲ, ಅಂಕಣಕಾರರಾಗಿ, ಅವರು ತಮ್ಮ ಬರಹಗಳ ಮೂಲಕ ಸಾಮಾಜಿಕ ಅಸಮಾನತೆ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರು. ಅವರ ನಿಧನವು ಭಾರತೀಯ ಪತ್ರಿಕೋದ್ಯಮಕ್ಕೆ ಗಮನಾರ್ಹ ನಷ್ಟವನ್ನು ಪ್ರತಿನಿಧಿಸುತ್ತದೆ" ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

"ಭಾರತೀಯ ಪತ್ರಿಕೋದ್ಯಮದ ಅತ್ಯುನ್ನತ ಧ್ವನಿಯಾದ ಪದ್ಮಭೂಷಣ ಟಿಜೆಎಸ್ ಜಾರ್ಜ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ತೀಕ್ಷ್ಣವಾದ ಅಂಕಣಗಳು ಮತ್ತು ನಿರ್ಭೀತ ವಿಮರ್ಶೆಯು ನಮ್ಮ ಸಾರ್ವಜನಿಕ ಸಂವಾದವನ್ನು ಶ್ರೀಮಂತಗೊಳಿಸಿದೆ" ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

SCROLL FOR NEXT