ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಪೇಜ್ ಓಪನ್ ಮಾಡಿ, ರೌಡಿಗಳ ಫೋಟೋ ಹಾಗೂ ವಿಡಿಯೋಗಳನ್ನು ಪ್ರಕಟಿಸುತ್ತಿದ್ದ 8 ಮಂದಿಗೆ ನಗರದ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರಿನ ಜಯನಗರ, ಬೊಮ್ಮನಹಳ್ಳಿ, ಆನೇಕಲ್ ಮತ್ತು ಚಿಕ್ಕಬಳ್ಳಾಪುರ ಭಾಗದವರಾದ ಒಬ್ಬ ಅಪ್ರಾಪ್ತ ಮತ್ತು ಒಬ್ಬ ಯುವತಿ ಸೇರಿದಂತೆ 8 ಜನರ ವಿರುದ್ಧ ಪೊಲೀಸರು ರೌಡಿ ಶೀಟ್ ಓಪನ್ ಮಾಡಿದ್ದಾರೆ.
ದೀಪಕ್(22), ಕುಶಾಲ್ (20), ಮನೋಜ್ (22), ವೇಣು.ಎನ್ (19), ಕುಮಾರಿ ಕೈಸರ್ (21), ಮಂಜುನಾಥ್ (31), ಶಂಕರ್ (32) ಹಾಗೂ ಮತ್ತೋರ್ವ ಬಾಲಕನ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದಲ್ಲಿನ ರೌಡಿಶೀಟರ್ ಆಗಿರುವ ವಿಲ್ಸನ್ ಗಾರ್ಡನ್ ನಾಗ ಮತ್ತು ಮೃತ ರೌಡಿಶೀಟರ್ ಸಿದ್ಧಾಪುರ ಮಹೇಶನ ತರಹೇವಾರಿ ವೀಡಿಯೋ, ಫೋಟೋಗಳಿಗೆ ಸಿನಿಮಾ ಡೈಲಾಗ್‌ಗಳನ್ನು ಸೇರಿಸುತ್ತಿದ್ದ ಆರೋಪಿಗಳು, ಅವುಗಳಿಗೆ ಬಾಸ್, ಕಿಂಗ್, ಅಣ್ಣ ಎಂದು ಶೀರ್ಷಿಕೆ ನೀಡಿ ಹೀರೋಗಳಾಗಿ ಬಿಂಬಿಸುತ್ತಿದ್ದರು. ಇದು ಇತರೆ ರೌಡಿಗಳ ನಡುವೆ ಪೈಪೋಟಿ ಹಾಗೂ ದ್ವೇಷದ ಭಾವನೆಗಳನ್ನು ಸೃಷ್ಟಿಸುತ್ತಿತ್ತು.
ಈ ಬೆಳವಣಿಗೆಯನ್ನು ಗಮನಿಸಿದ ಪೊಲೀಸರು, ಫ್ಯಾನ್ ಪೇಜ್ ತೆರೆದವರ ವಿರುದ್ದ ರೌಡಿಶೀಟ್ ತೆರೆದು ಬಿಸಿ ಮುಟ್ಟಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪೋಸ್ಟ್ಗಳು, ಕಾಮೆಂಟ್ಗಳು ಅಥವಾ ರಿಶೇರ್ ಮಾಡಿಕೊಳ್ಳುವಂತಹ ವಿಚಾರಗಳ ಬಗ್ಗೆ ಸಾರ್ವಜನಿಕರು ವಿಶೇಷವಾಗಿ ಕಾಳಜಿವಹಿಸಬೇಕು. ಇದಕ್ಕೆ ಸಂಬಂಧಪಟ್ಟ ಹಾಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸಿದ್ದಾಪುರ ಪೊಲೀಸರು ಸ್ವಯಂಪ್ರೇರಿತರಾಗಿ ದೂರು-ಪ್ರತಿದೂರುಗಳನ್ನು ದಾಖಲಿಸಿದ್ದಾರೆ.
ಆರೋಪಿಗಳ ಸೋಷಿಯಲ್ ಮೀಡಿಯಾ ಖಾತೆಗಳ ಬಳಕೆದಾರರನ್ನು ಪತ್ತೆ ಹಚ್ಚಿದಾಗ ಹಲವು ವಿದ್ಯಾರ್ಥಿಗಳಿರುವುದು ಬೆಳಕಿಗೆ ಬಂದಿದ್ದು, ಎಚ್ಚರಿಕೆ ನೀಡಲಾಗಿದೆ. ಸದ್ಯ ಎಂಟು ಜನರ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಕ್ರಮಗಳನ್ನು ಜರುಗಿಸುವ ಕಾರ್ಯ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.