ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಲವು ಕೆಮ್ಮಿನ ಸಿರಪ್‌ಗಳ ಸೇವನೆಯಿಂದ ಮಕ್ಕಳ ಸಾವು ಸಂಭವಿಸಿದ ವರದಿಗಳ ನಂತರ, ಕರ್ನಾಟಕ ಸರ್ಕಾರವು ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತ ಸಿರಪ್‌ಗಳನ್ನು ಶಿಫಾರಸು ಮಾಡದಂತೆ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಸೂಚಿಸಿದೆ. 'ಮಕ್ಕಳಲ್ಲಿ ಕೆಮ್ಮಿನ ಸಿರಪ್‌ಗಳ ತರ್ಕಬದ್ಧ ಬಳಕೆ' ಕುರಿತು ಅಕ್ಟೋಬರ್ 6 ರಂದು ಮಾರ್ಗಸೂಚಿ ಹೊರಡಿಸಿದ್ದು, "2 ರಿಂದ 5 ವರ್ಷದೊಳಗಿನ ಮಕ್ಕಳಿಗೆ, ಸ್ಪಷ್ಟವಾಗಿ ಸೂಚಿಸದ ಹೊರತು ಮತ್ತು ಸರಿಯಾದ ಕ್ಲಿನಿಕಲ್ ಮೌಲ್ಯಮಾಪನದ ನಂತರ ಸೂಚಿಸದ ಹೊರತು, ಅಂತಹ ಔಷಧಿಗಳನ್ನು ಸಾಮಾನ್ಯವಾಗಿ ತಪ್ಪಿಸಬೇಕು" ಎಂದು ಹೇಳಿದೆ. ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಔಷಧ ಮಾದರಿ ಪರೀಕ್ಷೆಯಲ್ಲಿ ರಾಜ್ಯ ನಂಬರ್ ಒನ್ ಇದೆ. ಈ ಕಾಫ್ ಸಿರಪ್ ನಮ್ಮ ರಾಜ್ಯದಲ್ಲಿ ಸರಬರಾಜು ಆಗಿಲ್ಲ ಎಂದು ತಿಳಿಸಿದರು. ಈಮಧ್ಯೆ, ತಮಿಳುನಾಡಿನ ಕಾಂಚೀಪುರಂ ಮೂಲದ ಶ್ರೀಸನ್ ಫಾರ್ಮಾ ತಯಾರಿಸಿದ 'ಕೋಲ್ಡ್‌ರಿಫ್ ಸಿರಪ್' ಮತ್ತು ಜೈಪುರದ ಕೇಸನ್ಸ್ ಫಾರ್ಮಾ ತಯಾರಿಸಿದ 'ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಸಿರಪ್'ಗಳ ಮಾರಾಟ ಮತ್ತು ಖರೀದಿಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.
ಕರ್ನಾಟಕ ಜಾತಿ ಗಣತಿ ಸಮೀಕ್ಷೆಗೆ ನಾಳೆ ಕೊನೆಯ ದಿನವಾಗಿದ್ದು, ಅವಧಿ ವಿಸ್ತರಣೆ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಸುಳಿವು ನೀಡಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಈ ಸಮೀಕ್ಷೆಯು ಸೆಪ್ಟೆಂಬರ್ 22ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 7ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ ರಾಜ್ಯದಲ್ಲಿ ಸಮೀಕ್ಷೆಯ ಪ್ರಗತಿ ಶೇಖಡ 70-80 ರಷ್ಟಾಗಿದೆ. ತಾಂತ್ರಿಕ ಹಾಗೂ ಗಣತಿದಾರರ ಗೊಂದಲಗಳಿಂದ ಸ್ವಲ್ಪ ವಿಳಂಬ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳದಿಂದ ಮರಳಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಸುಮಾರು ಶೇ 80 ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು ಉಳಿದ ಶೇ 20-25ರಷ್ಟಕ್ಕೆ ಸುಮಾರು ನಾಲ್ಕು ದಿನಗಳವರೆಗೆ ಗಡುವನ್ನು ವಿಸ್ತರಿಸಿದರೆ ಸಮೀಕ್ಷೆ ಪೂರ್ಣಗೊಳ್ಳುತ್ತದೆ ಎಂದು ಪರಮೇಶ್ವರ್ ಹೇಳಿದರು.
ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬೃಹತ್ ಗಾತ್ರದ ಅರಳಿಮರ ಬಿದ್ದ ಪರಿಣಾಮ 23 ವರ್ಷದ ಯುವತಿ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಭಾನುವಾರ ಸಂಜೆ ಪೀಣ್ಯ ದಾಸರಹಳ್ಳಿಯಲ್ಲಿ ಘಟನೆ ನಡೆದಿದ್ದು ಕೀರ್ತನಾ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು, ಆದರೆ ಅವರ ಜೊತೆಗಿದ್ದ ಸವಾರ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಅದೇ ಮರ ಬಿದ್ದ ಪರಿಣಾಮ ಮತ್ತೊಬ್ಬ ಬೈಕರ್ ಭಾಸ್ಕರ್ (40) ಗಾಯಗೊಂಡಿದ್ದಾರೆ. ಆದರೆ, ಹಿಂಬದಿ ಸವಾರನಾಗಿದ್ದ ಅವರ ಮಗಳು ಯಾವುದೇ ಹಾನಿಯಾಗದಂತೆ ಪಾರಾಗಿದ್ದಾರೆ.
ಬೆಂಗಳೂರಿನ ಕೇಂದ್ರ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಅದ್ದೂರಿ ಹುಟ್ಟುಹಬ್ಬ ಆಚರಣೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿNCR ದಾಖಲಾಗಿದೆ. ಜೈಲಿನಲ್ಲಿ ಬರ್ತ್ ಡೇ ಸಂಭ್ರಮದ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಜೈಲು ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ ಕಂಪ್ಲೇಂಟ್ ನೀಡಿದ್ದಾರೆ. ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ, ಆನಂದ್, ಅರುಣ, ಪ್ರವೀಣ್, ಸೂರ್ಯ, ಮಿಥುನ್, ಪ್ರಜ್ವಲ್, ಚೇತನ್, ಅರವಿಂದ್, ಕಾರ್ತಿಕ್ ಸೇರಿ ಹನ್ನೊಂದು ಮಂದಿಯ ವಿರುದ್ದ NCR ದಾಖಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಟವರ್ 1ರ 6ನೇ ಬ್ಯಾರಕ್ ನ 7ನೇ ಕೊಠಡಿಯಲ್ಲಿ ರೌಡಿ ಶೀಟರ್ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗಿತ್ತು. ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಹಣ ಪಡೆದು ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಆರೋಪ ಕೇಳಿಬಂದಿತ್ತು. ಆ ಬೆನ್ನಲ್ಲೇ ಪ್ರಕರಣ ಸಂಬಂಧ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ADGP ದಯಾನಂದ್ ಇಲಾಖಾ ವರದಿ ಕೇಳಿದ್ದಾರೆ.
ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿಯಂತೆ ನಟಿಸಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ವಜಾಗೊಂಡಿದ್ದ ಕಾನ್‌ಸ್ಟೆಬಲ್‌ನನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಐಜೂರ್ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ಆರೋಪಿ ಮುರ್ರೆಗಪ್ಪ ಬಂಧಿತ ಪೇದೆ. ಲೋಕಾಯುಕ್ತ ಅಧಿಕಾರಿ ಎಂದು ನಟಿಸಿ ಮಾಗಡಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಇದಾದ ನಂತರ, ಸಿಡಿಪಿಒ ಅಧಿಕಾರಿ ಸುರೇಂದ್ರ ದೂರು ದಾಖಲಿಸಿದ್ದರು. ಕರೆ ವಿವರ ದಾಖಲೆಗಳು ಮತ್ತು ತಾಂತ್ರಿಕ ಪುರಾವೆಗಳ ಆಧಾರದ ಮೇಲೆ, ಪೊಲೀಸರು ಆತನನ್ನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬಂಧಿಸಿದ್ದಾರೆ. ಆತನಿಂದ ಒಂಬತ್ತು ಸಿಮ್ ಕಾರ್ಡ್‌ಗಳು ಮತ್ತು ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.