ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ನವೆಂಬರ್ ನಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಕೊಪ್ಪಳದ ಬಸಾಪುರ ಲಘು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ರಾಜ್ಯ ರಾಜಕಾರಣದಲ್ಲಿ ನವೆಂಬರ್ ನಲ್ಲಿ ಯಾವ ಕ್ರಾಂತಿಯೂ ನಡೆಯಲ್ಲ. ಅವೆಲ್ಲಾ ಭ್ರಾಂತಿಯಷ್ಟೇ ಎಂದು ಹೇಳಿದರು.
ಇದೇ ವೇಳೆ ಜಾತಿ ಸಮೀಕ್ಷೆ ಕುರಿತು ಮಾತನಾಡಿದ ಅವರು, ಜಾತಿ ಸಮೀಕ್ಷೆಯಲ್ಲಿ ಯಾರನ್ನೂ ತುಳಿಯುತ್ತಿಲ್ಲ. ರಾಜ್ಯದಲ್ಲಿ ಸಮಾಜಿಕ, ಆರ್ಥಿಕ ಗಣತಿ ಆಗಬೇಕಿದೆ. ಈ ಸಮೀಕ್ಷೆ ಮಾಡದೇ ಹೋದರೆ ನಮಗೆ ಯಾವ ದತ್ತಾಂಶ ಸಿಗಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಜನರಿಗೆ ಉದ್ಯೋಗ ಸಿಕ್ಕಿದೆಯಾ? ಶಿಕ್ಷಣ ದೊರೆತಿದೆಯಾ? ಎನ್ನುವುದನ್ನ ನಾವು ತಿಳಿಯಬೇಕಿದೆ.
ಇದನ್ನೆಲ್ಲಾ ಹೇಗೆ ತಿಳಿಯುವುದು. ಸಮೀಕ್ಷೆ ಮಾಡುವುದರಿಂದ ಈ ದತ್ತಾಂಶ ನಮಗೆ ಸಿಗಲಿದೆ. ರಾಜ್ಯದ ಸಮಾಜಿಕ ಹಾಗೂ ಆರ್ಥಿಕ ಸ್ಥಿತಿ ಗತಿಗಳ ಅಂಕಿ ಅಂಶ ನಮಗೆ ಬೇಕಾಗಿದೆ. ನಾವು ಯಾವುದೇ ಜಾತಿಯನ್ನು ತುಳಿಯುವ ಪ್ರಶ್ನೆಯೇ ಇಲ್ಲ. ಸಮಾಜ ಸಮಾಜ ನಿರ್ಮಾಣ ನಮ್ಮ ಕೆಲಸ. ಆದರೆ, ಸಮ ಸಮಾಜ ವಿರೋಧ ಮಾಡುವವರು ಈ ಸಮೀಕ್ಷೆ ವಿರೋಧ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಮೀಕ್ಷೆ ನಾಳೆ ಸಂಜೆ ವರೆಗೂ ಏನಾಗಲಿದೆ ಏಷ್ಟಾಗಲಿದೆ ಎನ್ನುವುದು ನೋಡೋಣ. ಈಗಾಗಲೇ 1.10 ಕೋಟಿ ಸಮೀಕ್ಷೆ ಮುಗಿದಿದೆ. ಇನ್ನು ಎರಡು ದಿನದಲ್ಲಿ ಸಮೀಕ್ಷೆ ಮುಗಿಯುವ ವಿಶ್ವಾಸ ಇದೆ. ಸಮೀಕ್ಷೆ ಕಾದು ನೊಡೋಣ. ಕೊಪ್ಪಳ ಜಿಲ್ಲೆಯ ಸಮೀಕ್ಷೆ ಶೇ.97 ರಷ್ಟು ಮುಗಿದಿದೆ. ರಾಜ್ಯದಲ್ಲಿ ಬದಲಾವಣೆ ಬಯಸದವರು ಈ ಸಮೀಕ್ಷೆ ವಿರೋಧ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮೀಕ್ಷೆ ವಿರೋಧ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಅವರು ಕೇಂದ್ರ ಸಚಿವ. ಅಲ್ಲದೇ ಕೇಂದ್ರ ಸರ್ಕಾರ ಜಾತಿ ಸಮೀಕ್ಷೆ ಮಾಡುವುದನ್ನು ಅವರು ವಿರೋಧ ಮಾಡುತ್ತಾರಾ? ಸಮೀಕ್ಷೆ ವೇಳೆ ಜನರು ಏನು ಹೇಳುತ್ತಾರೋ ಅದನ್ನು ಅವರು ಬರೆದುಕೊಳ್ಳುತ್ತಾರೆ. ಇಂತದ್ದನ್ನೆ ಬರೆಸು ಎಂದು ನಾವು ಹೇಳಲ್ಲ ಎಂದು ಹೇಳಿದರು.
ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿನ ವಿಚಾರವಾಗಿ ಮಾತನಾಡಿ, ಅದು ಮುನ್ನೆಲೆಗೂ ಬಂದಿಲ್ಲ, ಹಿನ್ನೆಲೆಗೂ ಹೋಗಿಲ್ಲ. ಈಗ ಇದು ಇದೇ ಇದೇ ಇದೇ ಎಂದು ಮಾತನ ಧಾಟಿಯಲ್ಲಿ ಎಳೆದರಲ್ಲದೇ ಕೆಲವು ವಿರಕ್ತ ಸ್ವಾಮೀಜಿಯವರು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳು ನಿಂತಿಲ್ಲ.ಗ್ಯಾರಂಟಿ ನಿಂತಿವೆ ಎಂದು ಯಾರೂ ಹೇಳಿಲ್ಲ. ಸುಮ್ಮನೆ ಈ ಬಗ್ಗೆ ಹೇಳಬೇಡಿ ದಾಖಲೆ ಇದ್ದರೆ ಕೊಡಿ ಎಂದು ಹೇಳಿದರು.
ಮಕ್ಕಳ ಕೆಮ್ಮಿನ ಸಿರಪ್ ನಿಂದ ಬೇರೆ ರಾಜ್ಯದಲ್ಲಿ ಸಾವು ಸಂಭವಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ. ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಜಿಲ್ಲಾ ಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ಕಾರ್ಖಾನೆ ವಿಸ್ತರಣೆ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಕಾರ್ಖಾನೆಗಾಗಿ ಜಮೀನು ಕಳೆದುಕೊಂಡವರಿಗೆ ಇನ್ನಷ್ಟು ಪರಿಹಾರ ಕೊಡಬೇಕು ಎನ್ನುವ ಬೇಡಿಕೆಯಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು.