ಬೆಂಗಳೂರು: ಬಿಎಂಟಿಸಿ ಬಸ್‌ವೊಂದು ನಂದಿನಿ ಪಾರ್ಲರ್‌ಗೆ ನುಗ್ಗಿದ ಘಟನೆ ಕಮಲಾ ನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದಿದೆ.
ಕಮಲಾ ನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿ 96G ಸಂಖ್ಯೆಯ ಬಿಎಂಟಿಸಿ ಬಸ್ ಬೆಳಿಗ್ಗೆ 9:30ಕ್ಕೆ ಈ ಮಾರ್ಗದಲ್ಲಿ ಹೊರಟಿತ್ತು. ಈ ವೇಳೆ ಚಾಲಕ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದು, ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಬಳಿಕ ಬಸ್ ನಿಲ್ದಾಣದ ಬಳಿಯಿದ್ದ ನಂದಿನಿ ಪಾರ್ಲರ್ ಐಸ್‌ಕ್ರೀಮ್ ಅಂಗಡಿಗೆ ನುಗ್ಗಿದೆ.
ಇದರಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದವರು ಆತಂಕಗೊಂಡರು. ಅದೃಷ್ಟವಶಾತ್ ಯಾವುದೇ ಸಾವುನೋವುಗಳಾಗಿಲ್ಲ. ಬಸ್ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದು ಬಿಎಂಟಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ತನಿಖೆ ಆರಂಭಿಸಿದ್ದಾರೆ.
ಚಾಲಕನ ಹಠಾತ್ ಅನಾರೋಗ್ಯವು ಬಸ್ ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.