ಬೆಂಗಳೂರು: ಕುಡಿಯಲು ನೀರು ಕೊಡಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿರುವ ಘಟನೆ ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ.
ಮಧ್ಯಪ್ರದೇಶ ಮೂಲದ ಪ್ರೀತಿ ಸಿಂಗ್( 26) ಮೃತ ಮಹಿಳೆ. ಆರೋಪಿಯನ್ನು ಛೋಟೆಲಾಲ್ ಸಿಂಗ್ ಎಂದು ಗುರ್ತಿಸಲಾಗಿದೆ. ಸೆಪ್ಟೆಂಬರ್ 24 ರಂದು ಪೀಣ್ಯ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಕ್ಟೋಬರ್ 2ರಂದು ಮಹಿಳೆ ಸಾವನ್ನಪ್ಪಿದ್ದಾರೆ.
ಛೋಟೆಲಾಲ್ ಸಿಂಗ್ ಹಾಗೂ ಪ್ರೀತಿ ಸಿಂಗ್ ಇಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸೆ.24 ರಂದು ಕುಡಿದು ಮನೆಗೆ ಬಂದ ಛೋಟೆಲಾಲ್ ಹೆಂಡತಿ ಬಳಿ ನೀರು ಕೇಳಿದ್ದಾನೆ. ಈ ವೇಳೆ ಪ್ರೀತಿ ಸಿಂಗ್ ಅವರು, ನಾನು ಕೆಲಸಕ್ಕೆ ಹೋಗ್ಬೇಕು, ನೀನೇ ನೀರು ತಗೊಂಡು ಕುಡಿ ಎಂದು ಹೇಳಿದ್ದಾಳೆಂದು ತಿಳಿದುಬಂದಿದೆ.
ಇದರಿಂದ ಕೋಪಗೊಂಡ ಛೋಟೆಲಾಲ್ ಸಿಂಗ್, ಲಟ್ಟಣಿಗೆಯಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡ ಪ್ರೀತಿ ಅಲ್ಲೇ ಕೋಮಾಗೆ ಜಾರಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.