ಕೊಪ್ಪಳ: ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಯುವ ಮುಖಂಡನ ಹತ್ಯೆ ನಡೆದಿದೆ. ದೇವಿಕ್ಯಾಂಪ್‌ನಿಂದ ಗಂಗಾವತಿಗೆ ಬೈಕ್ ನಲ್ಲಿ ಬರುತ್ತಿದ್ದ ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬ ಎಂಬುವವರ ಭೀಕರ ಹತ್ಯೆಯಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿನಗರದ ಲೀಲಾವತಿ ಎಲುಬು ಕೀಲು ಆಸ್ಪತ್ರೆಯ ಮುಂದೆ ಕಳೆದ ತಡರಾತ್ರಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಧಾವಿಸಿರುವ ಡಿವೈಎಸ್ಪಿ ಸಿದ್ದನಗೌಡ ಪಾಟೀಲ್ ಪರಿಶೀಲನೆ ನಡೆಸಿದ್ದಾರೆ.
ನಡೆದ ಘಟನೆಯೇನು?
ಕೊಪ್ಪಳ ಜಿಲ್ಲೆಯ ಗಂಗಾವತಿ ಯುವ ಮೋರ್ಚಾದ ಅಧ್ಯಕ್ಷ ವೆಂಕಟೇಶ್(31ವ) ಕೊಲೆಯಾದ ದುರ್ದೈವಿ. ದೇವಿಕ್ಯಾಂಪ್‌ನಿಂದ ಗಂಗಾವತಿಗೆ ವೆಂಕಟೇಶ್ ಅವರು ಸ್ನೇಹಿತರ ಜೊತೆ ಊಟ ಮಾಡಿ ಬೈಕಿನಲ್ಲಿ ಬರುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಗ್ಯಾಂಗ್ ಸದಸ್ಯರು ಬೈಕಿಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಡಿವೈಸ್‌ಪಿ ಸಿದ್ದನಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣದ ಬಗ್ಗೆ ವೆಂಕಟೇಶ ಸ್ನೇಹಿತ ರಾಮು ಪ್ರತಿಕ್ರಿಯಿಸಿ, ಸ್ನೇಹಿತರೆಲ್ಲರೂ ಊಟಕ್ಕೆ ಹೋಗಿದ್ದೆವು. ವಾಪಸ್ ಮರಳುತ್ತಿದ್ದಾಗ 7-8 ಜನ ಮಾರಾಕಾಸ್ತ್ರಗನ್ನು ಹಿಡಿದು ನಮ್ಮನ್ನು ಬೆದರಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೊಲೆ ಮಾಡಲು ಬಳಸಿದ ಕಾರು ಪತ್ತೆ
ವೆಂಕಟೇಶ ಕೊಲೆ ಮಾಡಲು ಆರೋಪಿಗಳು ಬಳಕೆ ಮಾಡಿದ ಟಾಟಾ ಇಂಡಿಕಾ KA 01 AC 8729 ನಂಬರ್‌ನ ಕಾರು ಗಂಗಾವತಿಯ ಎಚ್ ಆರ್ ಎಸ್ ಕಾಲೋನಿಯಲ್ಲಿ ಪತ್ತೆಯಾಗಿದೆ. ಆರೋಪಿಗಳು ಬೆಂಗಳೂರು ಪಾಸಿಂಗ್ ಇರುವ ಕಾರು ಬಳಕೆ ಮಾಡಿದ್ದಾರೆ. ಕಾರ್ ಟೈರ್ ಬ್ಲಾಸ್ಟ್ ಆಗಿದ್ದರಿಂದ ಕಾರು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಕಾರಿನಲ್ಲಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಸ್ಥಳಕ್ಕೆ ಬೆರಳಚ್ಚು, ಶ್ವಾನದಳ ತಂಡದೊಂದಿಗೆ ತನಿಖೆ ಮುಂದುವರಿದಿದೆ.