ಬೆಂಗಳೂರು: ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇನ್ನು ಮೂರ್ನಾಲ್ಕು ದಿನದಲ್ಲಿ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಅವರ ಪುತ್ರ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಗುರುವಾರ ಹೇಳಿದ್ದಾರೆ.
ದೇವೇಗೌಡರ ಆರೋಗ್ಯ ವಿಚಾರಿಸಲು ಇಂದು ದೆಹಲಿಯಿಂದ ಬೆಂಗಳೂರಿಗೆ ಬಂದ ಎಚ್ ಡಿ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೇವರ ಆಶೀರ್ವಾದದಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ವೈದ್ಯರ ಚಿಕಿತ್ಸೆಯಿಂದ ಗೌಡರ ಆರೋಗ್ಯ ಸಮಸ್ಯೆಗಳು ಪರಿಹಾರವಾಗಿದೆ. ಅಭಿಮಾನಿಗಳು ಕಾರ್ಯಕರ್ತರು ಆತಂಕಪಡುವ ಅವಶ್ಯಕತೆ ಇಲ್ಲ. ಇನ್ನೊಂದು ಮೂರ್ನಾಲ್ಕು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಅನಾರೋಗ್ಯಕ್ಕೀಡಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಳಿ ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ನಿಂದ ಬಳಲುತ್ತಿದ್ದ ದೇವೇಗೌಡರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ದೇವೇಗೌಡರು ಚೇತರಿಸಿಕೊಂಡಿದ್ದಾರೆ.
ದೇವೇಗೌಡರು ದಾಖಲಾಗುತ್ತಿದ್ದಂತೆ ಪುತ್ರ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಆಸ್ಪತ್ರೆಗೆ ದೌಡಾಯಿಸಿದ್ದರು. ತಂದೆಯ ಆರೋಗ್ಯ ವಿಚಾರಿಸಿ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದೇ ಹಿಂದಿರುಗಿದ್ದರು. ನಂತರ ಆಪ್ತರಿಂದ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸಂದೇಶ ರವಾನಿಸಿದ್ದರು.