ಬೆಂಗಳೂರು: ಇಲ್ಲಿನ ಪಬ್‌ನ ಶೌಚಾಲಯದೊಳಗೆ 31 ವರ್ಷದ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೃತರನ್ನು ಮೇಘರಾಜ್ ಎಂದು ಗುರುತಿಸಲಾಗಿದ್ದು, ಅವರಿಗೆ ಪತ್ನಿ ಮತ್ತು ಆರು ತಿಂಗಳ ಮಗು ಇದೆ. ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ರಾಜರಾಜೇಶ್ವರಿ ನಗರದ ಪಬ್‌ಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಊಟ ಮಾಡಿ ಬಿಲ್ ಪಾವತಿಸಿದ ನಂತರ, ಸ್ನೇಹಿತರೊಂದಿಗೆ ಪಬ್‌ನಿಂದ ಹೊರಬರುತ್ತಿದ್ದಾಗ ಮೇಘರಾಜ್ ಅವರಿಗೆ ವಾಕರಿಕೆ ಬಂದಂತಾಗಿದ್ದರಿಂದ ಶೌಚಾಲಯಕ್ಕೆ ತೆರಳಿದ್ದಾರೆ. ಸ್ವಲ್ಪ ಹೊತ್ತು ಕಾಯ್ದ ಬಳಿಕ, ಸ್ನೇಹಿತರು ಅವರನ್ನು ಹುಡುಕುತ್ತಾ ಪಬ್ ಒಳಗೆ ಹೋಗಿದ್ದಾರೆ ಎಂದು ಅವರು ಹೇಳಿದರು.
ಪಬ್ ಮಹಡಿಯಲ್ಲಿ ಅವರು ಕಾಣದಿದ್ದಾಗ, ಅವರು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.
'ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಅವರು ವಾಶ್ ರೂಂಗೆ ಹೋಗಿ ಒಳಗೆ ಲಾಕ್ ಮಾಡಿಕೊಂಡಿರುವುದು ಕಂಡುಬಂದಿದೆ. ಬಾಗಿಲು ಒಡೆದು ನೋಡಿದಾಗ, ಅವರು ಕುಸಿದು ಬಿದ್ದು ಮೃತಪಟ್ಟಿರುವುದು ಕಂಡುಬಂದಿದೆ. ಅಪರಾಧ ಅಧಿಕಾರಿಗಳ (SOCO) ತಂಡವು ಸ್ಥಳೀಯ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದೆ' ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಎಸ್ ಗಿರೀಶ್ ಹೇಳಿದರು.
ಮೃತರ ಸಹೋದರನ ದೂರಿನ ಆಧಾರದ ಮೇಲೆ ಅಸಹಜ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.