ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಅವರು ಜೈಲಿನಲ್ಲಿ ತಮಗೆ ಕನಿಷ್ಠ ಸೌಲಭ್ಯ ನಿರಾಕರಿಸಲಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಜೈಲಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಶುಕ್ರವಾರ ಸೂಚಿಸಿದೆ.
ನಟ ದರ್ಶನ್ ಅವರ ವಿಚಾರಣೆ ನಡೆಸಿದ 57ನೇ ಸೆಷನ್ಸ್ ನ್ಯಾಯಾಲಯ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ಆದೇಶ ಪ್ರಕಟಿಸಿದ ಕೋರ್ಟ್, ಬೆಂಗಳೂರು ನಗರ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಆರೋಪಿ ದರ್ಶನ್ ಅವರನ್ನು ಯಾವ ಪರಿಸ್ಥಿತಿಯಲ್ಲಿ ಇರಿಸಲಾಗಿದೆ ಎಂಬುದನ್ನು ಪರಿಶೀಲಿಸುವಂತೆ ನಿರ್ದೇಶಿಸಿದೆ.
ಜೈಲಿಗೆ ಭೇಟಿ ನೀಡಿ ಸವಲತ್ತು ಪರಿಶೀಲಿಸಬೇಕು. ಕೋರ್ಟ್ ಆದೇಶ ಪಾಲನೆಯಾಗಿದೆಯೋ ಇಲ್ಲವೋ ಪರಿಶೀಲಿಸಬೇಕು. ಜೈಲು ಕೈಪಿಡಿಯಂತೆ ಸವಲತ್ತು ನೀಡಲಾಗಿದೆಯೇ ಎಂಬುದನ್ನು ಸಹ ಪರಿಶೀಲನೆ ಮಾಡಬೇಕು ಎಂದಿರುವ ಕೋರ್ಟ್, ಅಕ್ಟೋಬರ್ 18 ರೊಳಗೆ ವರದಿ ನೀಡುವಂತೆ ಸೂಚನೆ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಕೋರ್ಟ್ ಆದೇಶದಂತೆ ಸೌಲಭ್ಯ ನೀಡಲಾಗಿದೆ ಎಂದು ಜೈಲು ಅಧಿಕಾರಿಗಳ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ(SPP) ಪ್ರಸನ್ನ ಕುಮಾರ್ ಅವರು ಹೇಳಿದ್ದರು. ಆದರೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಪರ ವಕೀಲರು ಆರೋಪ ಮಾಡಿದ್ದರು. ದರ್ಶನ್ ಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ನ್ಯಾಯಾಧೀಶರೇ ಪರಶೀಲಿಸಬೇಕು ಎಂದು ದರ್ಶನ್ ಲಾಯರ್ ಮನವಿ ಮಾಡಿದ್ದರು.