ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿಯಿಡೀ ಭಾರೀ ಮಳೆಯಾಗಿದೆ. ನಿನ್ನೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ರಾತ್ರಿ 9 ಗಂಟೆಗೆ ಶುರುವಾಗಿ ಬೆಳಗಿನ ಜಾವದವರೆಗೂ ಬಿಡದೆ ಸುರಿಯುತ್ತಿತ್ತು. ನಗರದ ಪ್ರಮುಖ ರಸ್ತೆಗಳು, ತಗ್ಗುಪ್ರದೇಶಗಳು ಜಲಾವೃತವಾಗಿ ಜನ ಪರದಾಡಿದ್ದಾರೆ.
ಬೆಂಗಳೂರಿನಲ್ಲಿ ಅಕ್ಟೋಬರ್ 13ರ ವರೆಗೆ ಯೆಲ್ಲೋ ಅಲರ್ಟ್
ಬೆಂಗಳೂರಿನಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 13 ರ ವರೆಗೂ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ.
ಎಲ್ಲೆಲ್ಲಿ ಅವಾಂತರ?
ಮಳೆಯಿಂದಾಗಿ ಹಲವು ಕಡೆ ನದಿಯಂತಾಗಿದೆ. ರಸ್ತೆಯಲ್ಲಿ 2 ಅಡಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು. ಶಾಂತಿನಗರದ ರಿಚ್ಮಂಡ್‌ಟೌನ್‌ನಲ್ಲೂ ವರುಣಾರ್ಭಟದಿಂದಾಗಿ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ವಿಕ್ಟೋರಿಯಾ ರಸ್ತೆಯಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಪರದಾಡುವಂತಾಯಿರು. ಹೆಚ್‌ಎಎಲ್‌ನ ರಸ್ತೆಯ ವಿಕ್ಟೋರಿಯಾ ರೋಡ್‌ನಲ್ಲಿ ಮಳೆಯಿಂದ ಅವಾಂತರವೇ ಸೃಷ್ಟಿಯಾಗಿತ್ತು. ರಸ್ತೆ ತುಂಬ ನೀರು ತುಂಬಿಕೊಂಡಿದ್ದರಿಂದ ವಾಹನಗಳು ಚಲಿಸಲಾಗದೆ ಕೆಟ್ಟು ನಿಲ್ಲುತ್ತಿದ್ದ ದೃಶ್ಯ ಕಂಡುಬಂತು.
ಕೆಆರ್ ಮಾರ್ಕೆಟ್ ರಸ್ತೆಯಲ್ಲಿ ವಾಹನ ಸವಾರರ ಪರದಾಟ
ಭಾರಿ ಮಳೆಯಿಂದಾಗಿ ಬೆಂಗಳೂರು ಹೃದಯಭಾಗ ಕೆಆರ್ ಮಾರ್ಕೆಟ್‌ನ ರಸ್ತೆ ಜಲಾವೃತಗೊಂಡಿತು. ತಗ್ಗು ಪ್ರದೇಶಗಳು, ಹೊಂಡ ಗುಂಡಿಗಳಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ಇದು ಕೆಆರ್ ಪುರಂನ ಭೀಮಯ್ಯ ಲೇಔಟ್‌ನಲ್ಲಿ ಇಡೀ ಏರಿಯಾದ ಬೀದಿಗಳಿಗೆ ನೀರು ನುಗ್ಗಿದೆ. ಮನೆಯ ಕಾಂಪೌಂಡ್ಗಳು ಜಲಾವೃತಗೊಂಡಿವೆ. ರಾಜಕಾಲುವೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ರಾತ್ರಿ ಸುರಿದ ಮಳೆಯಿಂದ ಭೀಮಯ್ಯ ಲೇಔಟ್‌ನ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಕೆಲ ಮನೆಗಳ ಸಂಪ್‌ಗಳಿಗೆ ಕೊಳಚೆ ನೀರು ನುಗ್ಗಿ ನಿವಾಸಿಗಳು ರಾತ್ರಿಯಿಡೀ ಪರದಾಡಿದ್ದಾರೆ.
ಎಲೆಕ್ಟ್ರಾನಿಕ್ಸಿಟಿಯ ನೀಲಾದ್ರಿನಗರದಲ್ಲಿ ರಸ್ತೆ ಮುಳುಗಡೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲೂ ಮಳೆಯಿಂದಾಗಿ ರಸ್ತೆ ಮುಳುಗಡೆಯಾಯಿತು. ಚರಂಡಿ ನೀರು ರಸ್ತೆ ಮೇಲೆ ಉಕ್ಕಿ ಹರಿಯಿತು. ರಸ್ತೆಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಚಾಲಕರು ಎದ್ದುಬಿದ್ದು ಸವಾರಿ ಮಾಡುವಂತಾಯಿತು
ವರ್ತೂರು ಬಳಿ ಬಳಗೆರೆ ರಸ್ತೆ ಜಲಾವೃತ
ವರ್ತೂರು ಬಳಿಯ ಬಳಗೆರೆ ರಸ್ತೆಗೆ ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ ಖುದ್ದು ಭೇಟಿ ನೀಡಿ ಗುಂಡಿಗಳ ಅವ್ಯವಸ್ಥೆ ಪರಿಶೀಲಿಸಿದ್ದರು. ಆದರೆ ಸಿಎಂ ಬಂದುಹೋದರೂ ಕಾಮಗಾರಿಯಾಗಿಲ್ಲ. ಶುಕ್ರವಾರ ರಾತ್ರಿ ಸುರಿದ ಮಳೆಗೆ ಬಳಗೆರೆ ರಸ್ತೆಸಂಪೂರ್ಣ ಜಲಾವೃತವಾಯಿತು.
ಮಾನ್ಯತಾ ಟೆಕ್‌ಪಾರ್ಕ್‌ರಸ್ತೆಯಲ್ಲಿ ಮಳೆ ಸಂಕಷ್ಟ
ಪ್ರತಿಬಾರಿಯಂತೆ ಈ ಬಾರಿಯೂ ಮಾನ್ಯತಾ ಟೆಕ್‌ಪಾರ್ಕ್‌ನ ರಸ್ತೆ ಮಳೆಗೆ ಮುಳುಗಿಹೋಗಿತ್ತು. ಮತ್ತೊಂದೆಡೆ ನಾಗರಬಾವಿಯಲ್ಲಿ ಭಾರಿ ಮಳೆಯಿಂದಾಗಿ ಮರವೊಂದು ರಸ್ತೆ ಮಧ್ಯೆ ಬುಡಮೇಲಾಗಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಬೆಳಗ್ಗೆಯೂ ತುಂತುರು ಮಳೆ
ಬೆಂಗಳೂರಿನಲ್ಲಿ ತುಂತುರು ಮಳೆ ಇಂದು ಬೆಳಗ್ಗೆಯೂ ಮುಂದುವರಿದಿದ್ದು ಮೋಡಕವಿದ ವಾತಾವರಣವಿದೆ. ಮೋಡಗಳಿಂದ ತುಂತುರು ಮಳೆ ಸುರಿಯುತ್ತಿದ್ದಂತೆ ಸುತ್ತಲೂ ತೇವವಾಗಿದೆ.
10 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್
ಬೆಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಇತರೆಡೆ ಮಳೆ ಹೆಚ್ಚಾಗಿದೆ. 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.