ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ನಡೆಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳು, ಪಥಸಂಚಲನ, ಬೈಠಕ್ ನಿಷೇಧಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಕರ ಪಡೆ ಹೊಂದಿರುವ ಆರ್.ಎಸ್.ಎಸ್. ನ ನಿಷೇಧಕ್ಕೆ ಸಚಿವರು ಕರೆ ಕೊಟ್ಟಿರುವುದು ಅವರ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಯತ್ನಾಳ್, ಪ್ರಕೃತಿ ವಿಕೋಪ, ರೈಲು ದುರಂತ, ಕೋವಿಡ್, ಅಪಘಾತಗಳು, ಭೂಕಂಪ, ನೆರೆಯಾದಾಗ ನೊಂದವರಿಗೆ ಮೊದಲು ಆಸರೆಯಾಗುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು. ಸೇವಾತತ್ಪರತೆ, ಸಮಾಜ ಸೇವೆ, ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿ, ಶಿಸ್ತಿಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿದ್ದಾರೆ.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಎನ್ನದೇ ನಿಸ್ವಾರ್ಥ ಸೇವೆ ನೀಡುವ ಪ್ರಪಂಚದ ಏಕೈಕ ಸಂಘಟನೆಯಾಗಿದೆ. ಮನ ಮನೆಗಳನ್ನು ಬೆಸೆದುಕೊಳ್ಳುತ್ತಿರುವ ಸಂಘ ಚಿಂತನೆ ವ್ಯಾಪಿಸಿದ ಮತ್ತು ವ್ಯಾಪಿಸುತ್ತಿರುವ ರೀತಿ ಅನನ್ಯ ಎಂದು ಶ್ಲಾಘಿಸಿದ್ದಾರೆ.
ಸಂಘವನ್ನು ನಿಷೇಧ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ವಿರೋಧಿಗಳು ಪ್ರೀತಿಸುವ, ಗೌರವಿಸುವ ಜಗತ್ತಿನ ಏಕೈಕ ಸಂಘಟನೆಯೇ ಆರ್.ಎಸ್.ಎಸ್. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟು ಸ್ವಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಶ್ರೀ ಪ್ರಿಯಾಂಕ್ ಖರ್ಗೆ ಅವರು ಶ್ರಮಿಸಲಿ. ಅಷ್ಟಕ್ಕೂ, ನಿಷೇಧಗೊಳಿಸಬೇಕಾಗಿದ್ದರೆ ಕೂಡಲೇ ಎಸ್.ಡಿ.ಪಿ.ಐ ನಂತ ದೇಶ ವಿರೋಧಿ ಸಂಘಟನೆಗಳನ್ನು ನಿಷೇದ ಮಾಡಲಿ. ಅನ್ಯ ಕೋಮಿನ ಹಬ್ಬಗಳಂದು ತಲ್ವಾರ್ ತೋರಿಸಿ ಬೀದಿಗಳಲ್ಲಿ ಹೆಲ್ಮೆಟ್ ಧರಿಸದೇ ಓಡಾಡುವ ಪುಂಡರ ಹೆಡೆಮುರಿಕಟ್ಟಲಿ ಎಂದು ಸವಾಲು ಹಾಕಿದ್ದಾರೆ.
ಬಕ್ರೀದ್ ಸೇರಿದಂತೆ ಇತರ ಹಬ್ಬಗಳಲ್ಲಿ ಆಗುವ ಪ್ರಾಣಿಬಲಿಯನ್ನು ನಿಷೇಧಿಸಲಿ. ಆಂಗ್ಲ, ವಿಜ್ಞಾನ, ಗಣಿತ, ಸಮಾಜ ಹೇಳಿಕೊಡದೆ ದ್ವೇಷ, ಬೇರೆ ಧರ್ಮಗಳ ಬಗ್ಗೆ ತಪ್ಪು ವಿಚಾರಗಳನ್ನು ಕಲಿಸುವ ಮದರಸಗಳನ್ನು ನಿಷೇಧಿಸಲಿ. ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಕರೆಸಿಕೊಳ್ಳುವ ಹಾಗೂ ಅವರೇ ಪ್ರತಿನಿಧಿಸುವ ಕಲ್ಬುರ್ಗಿಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲಿ. ಸಂಘದ ನಿಷೇದ ಕನಸಿನ ಮಾತು ಎಂದು ಯತ್ನಾಳ್ ವಾಗ್ದಾಳ ನಡೆಸಿದ್ದಾರೆ.