ಬೆಂಗಳೂರು: ರಾಜ್ಯ ಮಟ್ಟದಲ್ಲಿ ಡೈವಿಂಗ್ ಚಾಂಪಿಯನ್ ಆಗಿರುವ 12ನೇ ತರಗತಿಯ ವಿದ್ಯಾರ್ಥಿ ನಿನ್ನೆ ಬೆಳಗ್ಗೆ ಶಾಲೆಯ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ನಡೆದಿದೆ.
ರಿಚರ್ಡ್ಸ್ ಟೌನ್‌ನ ಪಾಟರಿ ರಸ್ತೆಯಲ್ಲಿರುವ ಶಾಲೆಯಲ್ಲಿ ವಿದ್ಯಾರ್ಥಿಯನ್ನು ಬಿಟ್ಟು ತಂದೆ ತಮ್ಮ ಕೆಲಸಕ್ಕೆ ಹೋದ ಕೇವಲ 10 ನಿಮಿಷಗಳಲ್ಲಿ ಬೆಳಗ್ಗೆ 8.20 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ವಿದ್ಯಾರ್ಥಿ ಆರ್ಯನ್ ಮೋಸೆಸ್ ವ್ಯಾಸ್ ನನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಪಡೆಯುತ್ತಿದ್ದಾಗ ಆರ್ಯನ್ ಮೃತಪಟ್ಟಿದ್ದಾನೆ.
ಶಾಲಾ ಆವರಣದಲ್ಲಿರುವ ಸಿಸಿಟಿವಿಯಲ್ಲಿ ಆರ್ಯನ್ ಶಾಲಾ ಕಟ್ಟಡದ ಕ್ಯಾರಿ ಬ್ಲಾಕ್‌ನ ಎರಡನೇ ಮಹಡಿಯಿಂದ ಜಿಗಿದಿರುವುದು ಕಂಡುಬಂದಿದೆ. ಇದು ಆತ್ಮಹತ್ಯೆ ಪ್ರಕರಣ ಎಂದು ನಾವು ಭಾವಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ ಶಾಲೆಯ ಅಸೆಂಬ್ಲಿ ಸಮಯದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯ ತಂದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಂದಾಯ ಇಲಾಖೆಯ ಅಧಿಕಾರಿ ಮೋಸೆಸ್ ಕೇತನ್ ಎಚ್ ವ್ಯಾಸ್ ದೂರು ದಾಖಲಿಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ, ಡಿಜಿಟಲ್ ನಲ್ಲಿ ವಿದ್ಯಾರ್ಥಿ ಏನಾದರೂ ಬರೆದಿಟ್ಟಿದ್ದಾನೆಯೇ ಎಂದು ಪರಿಶೀಲಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಆಡಳಿತಾಧಿಕಾರಿ ಪ್ರೇಮ್ ರೂಬೆನ್, ಆರ್ಯನ್ ಒಬ್ಬ ಪ್ರತಿಭಾನ್ವಿತ ಕ್ರೀಡಾಪಟು ಮತ್ತು ಅಸಾಧಾರಣ ವಿದ್ಯಾರ್ಥಿ ಎಂದು ಹೇಳಿದ್ದಾರೆ. ಅವರು ರಾಷ್ಟ್ರೀಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದರು ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಇಂದು ಶಾಲೆಗೆ ರಜೆ ಘೋಷಿಸಲಾಗಿದೆ. ಪುಲಿಕೇಶಿ ನಗರ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ.