ಮೈಸೂರು: ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದು, ಕೆಲವು ಮನುವಾದಿಗಳ ಸಂಚಿನಿಂದ ಇಂದಿಗೂ ಬದಲಾವಣೆ ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ 2025 ಅಂತರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ, ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆಯವರು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಕೋರಿ ಪತ್ರ ಬರೆದಿದ್ದರು. ತಮಿಳುನಾಡಿನಲ್ಲಿ ಈ ದಿಸೆಯಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಮಾಜದಲ್ಲಿ ಬದಲಾವಣೆ ತರುವ ನಮ್ಮ ಪ್ರಯತ್ನಕ್ಕೆ ಹಲವು ತೊಡಕು ಎದುರಾಗುತ್ತವೆ. ಮೌಢ್ಯಗಳು, ಕಂದಾಚಾರಗಳ ನಿಗ್ರಹಕ್ಕೆ ನಮ್ಮ ಸರ್ಕಾರ ಕಾನೂನು ರೂಪಿಸಿದೆ. ನಮ್ಮಲ್ಲಿರುವ ಗುಲಾಮಗಿರಿಯ ಮನಸ್ಥಿತಿಯನ್ನು ಕಿತ್ತೊಗೆಯಬೇಕು, ತನ್ಮೂಲಕ ಎಲ್ಲರೂ ಮನುಷ್ಯರಾಗಬೇಕು. ಪ್ರೀತಿಯಿಂದ ದ್ವೇಷವನ್ನು ಗೆಲ್ಲಬೇಕು. ಬುದ್ಧ, ಬಸವಣ್ಣನವರ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕಿದೆ ಎಂದು ಹೇಳಿದರು.
ಜಡ್ಡುಗಟ್ಟಿದ ಸಮಾಜದಲ್ಲಿ ಪರಿವರ್ತನೆಯಾಗಬೇಕಾದರೆ ಹೆಚ್ಚು ಜನರಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಆದರ್ಶಗಳು ಪರಿಚಿತವಾಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಇಲ್ಲದ ಕಾರಣ ಅಸಮಾನತೆ ನಿರ್ಮಾಣವಾಗಿದೆ. ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೊಂದಿದ್ದರೆ ಮಾತ್ರ ಸಮಾನತೆ ಸಾಧ್ಯವಾಗುತ್ತದೆ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದರು. ಪರಧರ್ಮ ಸಹಿಷ್ಣುತೆ, ಸಹಬಾಳ್ವೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಮಾತ್ರ ದೇಶದಲ್ಲಿ ಶಾಂತಿ, ಅಹಿಂಸೆ ಸತ್ಯ ನೆಲೆಗೊಳ್ಳಲು ಸಾಧ್ಯ ಎಂದರು.
ಎಸ್‌ಸಿಎಸ್‌ಪಿ /ಟಿಎಸ್‌ಪಿ ಯೋಜನೆಗಾಗಿ 42 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಸಮಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಬರಲೇಬೇಕು. ನಮ್ಮ ಸರ್ಕಾರ ಗುತ್ತಿಗೆಗಳಲ್ಲಿ ಮೀಸಲಾತಿಯನ್ನು ತಂದಿದೆ. ಬಡ್ತಿಯಲ್ಲಿ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯ ಕೊಡದಿದ್ದರೂ ಸಮಿತಿ ರಚಿಸಿ, ಅದರ ವರದಿಯ ಆಧಾರದ ಮೇಲೆ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಸಮಾನತೆಯ ಜಾಗೃತಿಯ ಜೊತೆಗೆ ಪೂರಕ ಕಾರ್ಯಕ್ರಮಗಳಿದ್ದರೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಭಾಗ್ಯಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ನಮ್ಮ ಅಧಿಕಾರದ ಅವಧಿಯಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯಿಂದಾಗಿ ಒಂದು ದಿನದಲ್ಲಿ ಹಾಸನಾಂಬೆ ದರ್ಶನಕ್ಕೆ ಭೇಟಿ ನೀಡಿದ ಒಟ್ಟು 9 ಲಕ್ಷ ಪ್ರಯಾಣಿಕರ ಪೈಕಿ ಶೇ.70 ರಷ್ಟು ಮಹಿಳೆಯರೇ ಇದ್ದಾರೆ. ದೇವಸ್ಥಾನ, ಕೆಲಸದ ಸ್ಥಳಗಳಿಗೆ ಮಹಿಳೆಯರು ಓಡಾಡುವಂತಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.