2013ರ ಬಿಜೆಪಿ ಸರ್ಕಾರದ ಆದೇಶವನ್ನೇ ಮುಂದಿಟ್ಟು ಸಿದ್ದರಾಮಯ್ಯ ಸರ್ಕಾರ ಖಾಸಗಿ ಸಂಸ್ಥೆಗಳು, ಸಂಘಟನೆಗಳು ತಮ್ಮ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ RSS ಹೆಸರು ಉಲ್ಲೇಖಿಸದೆ ಅದರ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಈ ನಿಯಮ ಜಾರಿಯಾದರೆ RSS ಮಾತ್ರವಲ್ಲ. ಖಾಸಗಿ ಸಂಘ ಸಂಸ್ಥೆಗಳು/ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಕಡಿವಾಣ ಬೀಳಲಿದೆ. ಯಾರೇ ಯಾವುದೇ ಕಾರ್ಯಕ್ರಮ ಮಾಡುವುದಾದರೂ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕೂ ಮುನ್ನ, ಆರ್ ಎಸ್ ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗದಂತೆ ಕ್ರಮ ಕೈಗೊಳ್ಳಲು ಸುತ್ತೋಲೆ ಹೊರಡಿಸುವಂತೆ ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ. RSS ಕಾರ್ಯಕ್ರಮಗಳಲ್ಲಿ ಸರ್ಕಾರಿ ಅಧಿಕಾರಿಗಳು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುತ್ತಾರೆ. ಹಲವಾರು ಪಿಡಿಒಗಳು, ಗ್ರಾಮ ಲೆಕ್ಕಿಗರು ಮತ್ತು ಇತರ ರಾಜ್ಯ ಅಧಿಕಾರಿಗಳು ಇಂತಹ ಹೇಳಿಕೆಗಳನ್ನು ಕೊಟ್ಟಿದ್ದು ಅವರಿಗೆ ಶೋಕಾಶ್ ನೋಟಿಸ್ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಅವರನ್ನು ಅಮಾನತುಗೊಳಿಸಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈಮಧ್ಯೆ, ಸಚಿವ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಧನೇಶ್ ನರೋಣೆ ಅಲಿಯಾಸ್ ದಾನಪ್ಪ ನರೋಣೆ ಎಂಬಾತನನ್ನು ಮಹಾರಾಷ್ಟ್ರದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಸರಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ನಿರಾಕರಿಸಿದ್ದಾರೆ. ನಾವು ಹಿಂದುಳಿದ ವರ್ಗದ ಯಾವ ಜಾತಿಗೂ ಸೇರುವವರಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಅಕ್ಟೋಬರ್ 10ರಂದು ಸುಧಾಮೂರ್ತಿ ದಂಪತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದರು. ಮತ್ತೊಂದೆಡೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಸಹ ಸಮೀಕ್ಷೆಗೆ ಸ್ಪಂದಿಸಿಲ್ಲ. ಮನೆಗೆ ಸಮೀಕ್ಷೆಗೆಂದು ತೆರಳಿದ್ದ ಸಿಬ್ಬಂದಿ ಗಣತಿ ಮಾಡದೆ ಹಿಂದಿರುಗಿದ್ದಾರೆ. ಮನೆಯ ಕಾಲಿಂಗ್ ಬೆಲ್ ಮಾಡಿದಾಗ ಯಾರೂ ಪ್ರತಿಕ್ರಿಯೆ ನೀಡಿಲ್ಲ ಅಂತಾ ಅಪ್ಡೇಟ್ ಮಾಡಿ ಎಂದು ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ಕಾರ್ಮಿಕ ಇಲಾಖೆ ಸಿದ್ಧಪಡಿಸಿರುವ ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕರಡು ಮಸೂದೆಯು ಒಪ್ಪಂದವಿಲ್ಲದೆ ಮನೆಗೆಲಸದವರ ನೇಮಕವನ್ನು ನಿಷೇಧಿಸುತ್ತದೆ. ಅಲ್ಲದೆ ಅವರಿಗೆ ಕನಿಷ್ಠ ವೇತನವನ್ನು ನೀಡುವುದನ್ನು ಕಡ್ಡಾಯಗೊಳಿಸುತ್ತದೆ. ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುವ ಉದ್ಯೋಗದಾತರು ಅಥವಾ ಸೇವಾ ಪೂರೈಕೆದಾರರು ಅಥವಾ ಏಜೆನ್ಸಿಗಳ ವಿರುದ್ಧ ಗರಿಷ್ಠ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ನಿನ್ನೆ ಪ್ರಕಟವಾದ ಕರಡು ಮಸೂದೆಗೆ ನಾಗರಿಕರು ಸಲಹೆಗಳನ್ನು ನೀಡಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ. ಕರಡು ಮಸೂದೆಯ ಪ್ರಕಾರ, ಉದ್ಯೋಗದಾತ ಮತ್ತು ಕಾರ್ಮಿಕರ ನಡುವೆ ಲಿಖಿತ ಒಪ್ಪಂದವಿಲ್ಲದೆ ಯಾವುದೇ ಮನೆಗೆಲಸದವರನ್ನು ನೇಮಿಸಿಕೊಳ್ಳಬಾರದು. ಅಂತಹ ಒಪ್ಪಂದದಲ್ಲಿ ನಿಯಮಗಳಡಿ ಕಾರ್ಮಿಕ ಮಾನದಂಡಗಳನ್ನು ತಿಳಿಸಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ಜೀವನ ಪಯಣದ ಕುರಿತ ಪುಸ್ತಕ 'ಎ ಸಿಂಬಲ್ ಆಫ್ ಲಾಯಲ್ಟಿ DK Shivakumar' ಬಿಡುಗಡೆಯಾಗಿದೆ. ಕೆಎಂ ರಘು ರಚಿಸಿರುವ ಪುಸ್ತಕ ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್ ಆಗಾಗ ಹಿಂದುತ್ವದ ಬಗ್ಗೆ ಮೃದು ಧೋರಣೆ ತಳೆಯುತ್ತಾರೆ. ಬಿಜೆಪಿಗೆ ಹೋಗಲು ಅವರಿಗೆ ಆಫರ್ ಇದೆ. ಅವರಿಗೂ ಮನಸ್ಸಾಗಿತ್ತು ಎಂಬ ಮಾತುಗಳು ಬಿಜೆಪಿ ನಾಯಕರಿಂದ ಈ ಹಿಂದೆ ಕೇಳಿಬಂದಿದ್ದವು. ಒಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಬಗ್ಗೆ ಹೇಳಿದ್ದರು. ಹೌದು... ಬಿಜೆಪಿಯಿಂದ ನನಗೆ ಆಫರ್ ಬಂದಿದ್ದು ನಿಜ. ದೆಹಲಿಯಿಂದ ನನಗೆ ಫೋನ್ ಬಂದಿತ್ತು. ಇನ್‌ಕಮ್ ಟ್ಯಾಕ್ಸ್ ಆಡಿಟರ್‌ರಿಂದ ಫೋನ್ ಮಾಡಿ ಮಾತನಾಡಿಸಿದ್ದರು. ಅಲ್ಲಿ ಒಬ್ಬ ಡಿಜಿ ಸಹ ಇದ್ದ. ಅವನು ಮಾತನಾಡಿದ. ಡಿಸಿಎಂ ಆಗುತ್ತೀರಾ ಅಥವಾ ಜೈಲಿಗೆ ಹೋಗುತ್ತೀರಾ ಎರಡರಲ್ಲಿ ಒಂದು ಆಯ್ಕೆ ಮಾಡಬೇಕು ಎಂದ. ಆದರೆ ನಾನು ಪಕ್ಷನಿಷ್ಠೆಗಾಗಿ ಡಿಸಿಎಂ ಬೇಡ ಎಂದು ಜೈಲುವಾಸವನ್ನೇ ಆಯ್ಕೆ ಮಾಡ್ಕೊಂಡೆ ಎಂದು ಶಿವಕುಮಾರ್ ಹೇಳಿದ್ದಾರೆ.