ಚಾಮರಾಜನಗರ: ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಕಿರುಕುಳ ಹಾಗೂ 27 ತಿಂಗಳಿಂದ ಸಂಬಳ ಸಿಗದೆ ಮನನೊಂದ 'ವಾಟರ್ ಮ್ಯಾನ್' ಪಂಚಾಯಿತಿ ಕಚೇರಿಯ ಕಿಟಕಿ ಗ್ರಿಲ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಂಗನೂರಿನಲ್ಲಿ ನಡೆದಿದೆ.
ಮೃತರನ್ನು ಚಿಕ್ಕೂಸಾ ನಾಯಕ್ ಎಂದು ಗುರುತಿಸಲಾಗಿದೆ. ಒಂಬತ್ತು ವರ್ಷಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಮೂವರು ಮಕ್ಕಳಿದ್ದಾರೆ.
ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಧ್ಯಕ್ಷೆಯ ಪತಿ ಮೋಹನ್‌ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮೇಗೌಡ ಸೇರಿದಂತೆ ಪಂಚಾಯಿತಿ ಅಧಿಕಾರಿಗಳು 27 ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಮೋಹನ್ ಕುಮಾರ್ ಮತ್ತು ರಾಮೇಗೌಡ ಕಿರುಕುಳ ನೀಡಿದ್ದಾರೆ. ವೇತನವಿಲ್ಲದೆ ಕೆಲಸ ಮಾಡಲು ಒತ್ತಾಯಿಸಿದ್ದಾರೆ ಎಂದು ಚಿಕ್ಕೂಸಾ ನಾಯಕ್ ತಮ್ಮ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಮೋಹಕುಮಾರ್ ಮತ್ತು ರಾಮೇಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪಿಡಿಒ ಅವರೇ ಎಲ್ಲ ಅಧಿಕಾರವನ್ನು ಹೊಂದಿದ್ದು, ಈ ಪರಿಸ್ಥಿತಿಗೆ ಅವರೇ ಕಾರಣರಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ.