ಬಾಗಲಕೋಟೆ: ದೇಶಾದ್ಯಂತ ದೀಪಾವಳಿ ಹಬ್ಬ ನಾಳೆ ಆರಂಭವಾಗುತ್ತಿದೆ. ಜನರು ಲಗುಬಗೆಯಿಂದ ಸಿದ್ಧತೆ ನಡೆಸುತ್ತಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್ನಲ್ಲಿರುವ ಮನೆಯೊಂದರ ಬಾಗಿಲು ಎದುರು ಹಚ್ಚಿದ್ದ ದೀಪದಿಂದ ಬೆಂಕಿ ತಗುಲಿ ಏಳು ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗಿದ್ದೇನು?
ಉಮೇಶ್ ಮೇಟಿ ಎಂಬುವವರ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದೇ ಕಟ್ಟಡದಲ್ಲಿ ರಾಜೇಂದ್ರ ತಪಶೆಟ್ಟಿ ಕುಟುಂಬ ಸೇರಿ ಮತ್ತೊಂದು ಕುಟುಂಬ ಬಾಡಿಗೆಗೆ ಇದ್ದರು. ರಾಜೇಂದ್ರ ತಪಶೆಟ್ಟಿ ಕುಟುಂಬಸ್ಥರು ಮನೆ ಎದುರು ದೀಪ ಹಚ್ಚಿದ್ದರು.
ಆ ದೀಪದ ಬೆಂಕಿ ಮನೆ ಎದುರಿಗೆ ಬಿದ್ದ ಆಯಿಲ್ಗೆ ತಗುಲಿ ಬೆಂಕಿ ಹೊತ್ತಿದೆ. ಮನೆ ಮುಂದಿನ ಎರಡು ಬೈಕ್ ಸುಟ್ಟು, ಮನೆಗೂ ಬೆಂಕಿ ಪ್ರವೇಶಿಸಿದೆ. ಅಡುಗೆ ಮನೆಯ ಸಿಲಿಂಡರ್ ಕೂಡ ಸೋರಿ ಮತ್ತಷ್ಟು ಬೆಂಕಿಯ ತೀವ್ರತೆ ಹೆಚ್ಚಾದೆ. ನೋಡನೋಡುತ್ತಿದ್ದಂತೆ ಮನೆ ಸುಟ್ಟು ಕರಕಲಾಗಿ ಹೋಗಿದೆ.
ರಾಜೇಂದ್ರ ತಪಶೆಟ್ಟಿ ಬೋರ್ ವೆಲ್ ಕೆಲಸ ಮಾಡುತ್ತಿದ್ದರು. ಮನೆ ಎದುರು ಬೋರ್ ವೆಲ್ ವಾಹನಗಳ ಆಯಿಲ್, ಗ್ರೀಸ್ ಬಿದ್ದಿತ್ತು. ದೀಪದ ಬೆಂಕಿ ಆಯಿಲ್, ಗ್ರೀಸ್ಗೆ ತಗುಲಿ ನಂತರ ಬೈಕ್ ಮತ್ತು ಮನೆಗೂ ವ್ಯಾಪಿಸಿದೆ. ಈ ವೇಳೆ ಹೊರಗಡೆ ಓಡಿ ಬಂದು ರಾಜೇಂದ್ರ ತಪಶೆಟ್ಟಿ ಕುಟುಂಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.