ಬೆಂಗಳೂರು: ಮುಂಬೈ, ಕೋಲ್ಕತ್ತಾ ಮತ್ತು ದೆಹಲಿಯಂತಹ ಇತರ ಪ್ರಮುಖ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಸಂಚಾರ ನಿರ್ವಹಣಾ ವ್ಯವಸ್ಥೆಯು ಉತ್ತಮ ಸ್ಥಿತಿಯಲ್ಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಶನಿವಾರ ಹೇಳಿದ್ದಾರೆ.
ವಿಧಾನಸೌಧ ಮುಂಭಾಗದಲ್ಲಿ ನಡೆದ ಬೆಂಗಳೂರು ನಗರ ಸಂಚಾರ ಪೊಲೀಸ್ ಹಾಗೂ ಹೋಂಡಾ ಇಂಡಿಯಾ ಫೌಂಡೇಶನ್ ರವರ ಸಹಯೋಗದಲ್ಲಿ 50 ಸಂಚಾರ ಗಸ್ತು ವಾಹನಗಳನ್ನು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಪರಮೇಶ್ವರ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಚಿವರು, ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ಬಿಟಿಪಿ ಅಸ್ತ್ರಂ ಆ್ಯಪ್‌ನಲ್ಲಿ ನೂತನವಾಗಿ ಸೇರ್ಪಡೆ ಮಾಡಿರುವ 'ಇ-ಆ್ಯಕ್ಸಿಡೆಂಟ್' ಹೊಸ ಆವಿಷ್ಕಾರವನ್ನು ಬಿಡುಗಡೆ ಮಾಡಿದರು.
ಅಪಘಾತದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು ಹಾಗೂ ವಿಮೆ ಪಡೆದುಕೊಳ್ಳಲು ಸರಳಗೊಳಿಸುವ ನಿಟ್ಟಿನಲ್ಲಿ ಆ್ಯಪ್'ನ್ನು ಪರಿಚಯಿಸಲಾಗಿದೆ. ಬಿಟಿಪಿ ಅಸ್ತ್ರಂ ಆ್ಯಪ್‌ನಲ್ಲಿ ಇ-ಆ್ಯಕ್ಸಿಡೆಂಟ್ ಮೂಲಕ ರಿಪೋರ್ಟ್ ಮಾಡಿದರೆ ಸುಲಭವಾಗಿ ವಿಮೆ ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಸಂಚಾರ ದಟ್ಟಣೆ ಸಮಸ್ಯೆ ಕುರಿತು ಮಾತನಾಡಿದ ಅವರು, ಮುಂಬೈ, ಕೋಲ್ಕತ್ತಾ ಮತ್ತು ದೆಹಲಿಯಂತಹ ಇತರ ಪ್ರಮುಖ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಸಂಚಾರ ನಿರ್ವಹಣಾ ವ್ಯವಸ್ಥೆಯು ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.
ಕಾರ್ಪೊರೇಟ್ ಕಂಪನಿಗಳು ಮತ್ತು ಕೈಗಾರಿಕೆಗಳು ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಡಿಯಲ್ಲಿ ತಮ್ಮ ಲಾಭದ ಕನಿಷ್ಠ ಶೇ.2 ರಷ್ಟು ಹಣ ಖರ್ಚು ಮಾಡುವ ಮೂಲಕ ಸಾರ್ವಜನಿಕ ಕಲ್ಯಾಣ ಚಟುವಟಿಕೆಗಳಿಗೆ ಕೊಡುಗೆ ನೀಡಬೇಕು. ಅನೇಕ ಕಂಪನಿಗಳು ಈ ದಿಕ್ಕಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.
ಹೋಂಡಾ ಇಂಡಿಯಾ ಫೌಂಡೇಶನ್ ಬೆಂಗಳೂರು ನಗರ ಸಂಚಾರ ಪೊಲೀಸರಿಗೆ 1.3 ಕೋಟಿ ರೂ. ಮೌಲ್ಯದ 50 ಗಸ್ತು ಬೈಕ್‌ಗಳನ್ನು ದೇಣಿಗೆ ನೀಡುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ದ್ವಿಚಕ್ರ ವಾಹನಗಳು ಪೊಲೀಸರು ಸಂಚಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.