ಪ್ರಾತಿನಿಧಿಕ ಚಿತ್ರ 
ರಾಜ್ಯ

ರಾಜ್ಯದೆಲ್ಲೆಡೆ ಸಂಭ್ರಮದ ದೀಪಾವಳಿ ಆಚರಣೆ; ಹಸಿರು ಪಟಾಕಿಗಳನ್ನು ಬಳಸಲು ಸಿಎಂ ಸಿದ್ದರಾಮಯ್ಯ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯದೆಲ್ಲೆಡೆ ಸೋಮವಾರ ದೀಪಾವಳಿಯನ್ನು ಉತ್ಸಾಹದಿಂದ ಆಚರಿಸಲಾಗುತ್ತಿದ್ದು, ಜನರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಹೂವುಗಳು ಮತ್ತು ದೀಪಗಳಿಂದ ತಮ್ಮ ಮನೆಗಳನ್ನು ಅಲಂಕರಿಸಿದ್ದು, ಬೆಳಕಿನ ಹಬ್ಬದ ಅಂಗವಾಗಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಸಿದ್ದರಾಮಯ್ಯ, 'ನಾಡಬಂಧುಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಕತ್ತಲಿನಿಂದ ಬೆಳಕಿನ ಹಾದಿ ತೋರುವ ಈ ಹಬ್ಬವು ಸಮಾಜವನ್ನು ಬಾಧಿಸುತ್ತಿರುವ ದ್ವೇಷ, ಹಿಂಸೆ, ಅಸತ್ಯ, ಅಶಾಂತಿ, ಬಡತನ, ಅಜ್ಞಾನಗಳ ಅಂಧಕಾರವನ್ನು ಸರಿಸಿ, ಸ್ನೇಹ, ಸಹಬಾಳ್ವೆ, ಸತ್ಯ, ನೆಮ್ಮದಿ, ಸುಜ್ಞಾನದ ಬೆಳಕನ್ನು ಎಲ್ಲೆಡೆ ಬೆಳಗಿಸಲಿ ಎಂದು ಹಾರೈಸುತ್ತೇನೆ.' ಎಂದು ಹೇಳಿದರು.

'ಹಬ್ಬದ ಸಂಭ್ರಮದ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರಿ. ಹಸಿರು ಪಟಾಕಿಗಳನ್ನೇ ಬಳಸಿ, ಎಳೆಯ ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಅವರ ಬಗ್ಗೆ ಜಾಗೃತೆ ವಹಿಸಿ. ದೀಪಾವಳಿಯನ್ನು ಸಂಭ್ರಮದಿಂದಲೂ, ಸುರಕ್ಷಿತವಾಗಿಯೂ ಆಚರಿಸಿ ಎಂದು ವಿನಂತಿಸುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು' ಎಂದು ಹೇಳಿದ್ದಾರೆ.

'ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ದೀಪಾವಳಿಯು ಪ್ರತಿಯೊಬ್ಬರ ಬದುಕಿನ ಸಂಕಷ್ಟಗಳನ್ನು ಕಳೆದು, ಪ್ರಗತಿಯ ಬೆಳಕು ಬದುಕಿನಲ್ಲಿ ಪಸರಿಸಲಿ. ದೀಪಗಳ ಹಬ್ಬವು ತಮ್ಮೆಲ್ಲರ ಜೀವನದಲ್ಲಿ ಯಶಸ್ಸು, ಸಮೃದ್ಧಿ, ಐಶ್ವರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಉಪ ಮುಖ್ಯಮಂತ್ರಿ ಶಿವಕುಮಾರ್ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಕೆಆರ್ ಮಾರುಕಟ್ಟೆ, ಚಿಕ್ಕಪೇಟೆ ಮತ್ತು ಅವೆನ್ಯೂ ರಸ್ತೆ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಬೆಳಗಿನ ಜಾವದಿಂದಲೇ ಜನರು ಖರೀದಿಯಲ್ಲಿ ತೊಡಗಿದ್ದರು. ಸಿಹಿತಿಂಡಿಗಳು, ಹೂವುಗಳು, ಮಣ್ಣಿನ ದೀಪಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದರು.

ದೆಹಲಿ-ಎನ್‌ಸಿಆರ್‌ನಲ್ಲಿ ಪಟಾಕಿ ಬಳಕೆಯನ್ನು ನಿಯಂತ್ರಿಸುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಿರ್ದೇಶನದ ನಂತರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ರಾಜ್ಯಾದ್ಯಂತ ಇದೇ ರೀತಿಯ ನಿರ್ಬಂಧಗಳನ್ನು ಜಾರಿಗೆ ತಂದಿದೆ.

ಹಸಿರು ಪಟಾಕಿಗಳಲ್ಲದೆ ಅಕ್ರಮ ಸಂಗ್ರಹಣೆ, ಮಾರಾಟ ಮತ್ತು ವ್ಯಾಪಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಅಕ್ಟೋಬರ್ 21 ಮತ್ತು 22 ರಂದು ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಮಂಡಳಿಯು ಅನುಮತಿ ನೀಡಿದೆ.

ನಗರದಾದ್ಯಂತ ಆಸ್ಪತ್ರೆಗಳು ಪಟಾಕಿ ಸಂಬಂಧಿತ ಗಾಯಗಳನ್ನು ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿವೆ. ವಿಕ್ಟೋರಿಯಾ ಆಸ್ಪತ್ರೆ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಗಳು ಸಕಾಲಿಕ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ತುರ್ತು ಘಟಕಗಳನ್ನು ಸ್ಥಾಪಿಸಿವೆ.

ಕರ್ನಾಟಕದಲ್ಲಿ ದೀಪಾವಳಿಯನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ನರಕ ಚತುರ್ದಶಿ, ಇದರಲ್ಲಿ ಸಾಂಪ್ರದಾಯಿಕ ಎಣ್ಣೆ ಸ್ನಾನ ಮತ್ತು ಪಟಾಕಿ ಸಿಡಿಸಲಾಗುತ್ತದೆ; ಸಂಪತ್ತಿನ ದೇವತೆಗೆ ಅರ್ಪಿತವಾದ ಅಮಾವಾಸ್ಯೆಯಂದು (ಅಮಾವಾಸ್ಯೆ) ಲಕ್ಷ್ಮಿ ಪೂಜೆ ಮತ್ತು ರಾಜ ಬಲಿಯನ್ನು ಗೌರವಿಸಲು ಬಲಿಪಾಡ್ಯಮಿ ಆಚರಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭ.. ಸುಳ್ಳು ಸುದ್ದಿ ಹರಡಿದ್ರೆ ಕೇಸ್ ಹಾಕ್ತೀವಿ': ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯ ಸರ್ಕಾರಕ್ಕೆ ಸೆಡ್ಡು: ಕಲಬುರಗಿಯಲ್ಲಿ ನಡೆದ RSS ಪಥಸಂಚಲನದಲ್ಲಿ ಭಾಗಿಯಾದ ಸರ್ಕಾರಿ ವೈದ್ಯ, Congress ಕಾರ್ಯಕರ್ತರು!

ತಮ್ಮ ಪಕ್ಷದ ಡಿಸಿಎಂಗೆ ಮತ ಹಾಕಬೇಡಿ ಎಂದು ಬಿಹಾರಿಗಳಿಗೆ ಬಿಜೆಪಿ ನಾಯಕ ಮನವಿ!

'96 ಲಕ್ಷ ನಕಲಿ ಮತದಾರರ ಸೇರ್ಪಡೆ': ಚುನಾವಣಾ ಆಯೋಗದ ವಿರುದ್ಧ ರಾಜ್ ಠಾಕ್ರೆ ಕಿಡಿ

ಶಿಮ್ಲಾದಲ್ಲಿ ಪಂಚಾಯತ್ ಮುಖ್ಯಸ್ಥನಿಂದ ಬಾಲಕಿ ಮೇಲೆ ಅತ್ಯಾಚಾರ!

SCROLL FOR NEXT