ಚಿತ್ರದುರ್ಗ: ಮನೆಗೆ ಫೋನ್ ಕರೆ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಶಿಕ್ಷಕನೊಬ್ಬ ಕಾಲಿನಿಂದ ಎಲ್ಲೆಂದರಲ್ಲಿ ಒದ್ದು, ಮನಸೋ ಇಚ್ಚೆ ಥಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನರ ರಾಕ್ಷಸನ ಕ್ರೂರ ವರ್ತನೆ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗುರು ತಿಪ್ಪೇಸ್ವಾಮಿ ದೇವಸ್ಥಾನದ ಅಧೀನದ ವೇದ ಅಧ್ಯಯನ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವೀರೇಶ್ ಹಿರೇಮಠ್ ಎಂದು ಗುರುತಿಸಲಾದ ಶಿಕ್ಷಕ, ವಿದ್ಯಾರ್ಥಿಯನ್ನು ನೆಲಕ್ಕೆ ತಳ್ಳಿ ಎಲ್ಲೆಂದರಲ್ಲಿ ಮನಬಂದಂತೆ ಒದ್ದಿದ್ದಾನೆ. ಬಳಿಕ ಕೈಯಿಂದ ಮನಸ್ಸೋ ಇಚ್ಛೆ ಥಳಿಸಿದ್ದಾರೆ.
ವಿದ್ಯಾರ್ಥಿಗೆ ಕೈಗೆ ಪೆಟ್ಟಾದರೂ ಬಿಟ್ಟಿಲ್ಲ. ಹೊಡೆಯುವುದನ್ನು ಮುಂದುವರೆಸಿದ್ದಾರೆ. ಈ ಸಂಬಂಧ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ದೂರು ನೀಡಿದ್ದು, ನಾಯಕನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಆರೋಪಿ ಶಿಕ್ಷಕ ನಾಪತ್ತೆಯಾಗಿದ್ದಾನೆ. ಆತನಾಗಿ ಪೊಲೀಸರು ಹುಡುಕಾಟ ಆರಂಭಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದು,ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೆಲ ಪೋಷಕರು ಶಾಲೆ ಬಳಿ ಪ್ರತಿಭಟನೆ ನಡೆಸಿದರು. ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಬರ್ಬರ ಹಲ್ಲೆ ವಿಚಾರ ತಿಳಿದಿದೆ. ಮಕ್ಕಳ ಮೇಲೆ ಯಾರೂ ಕೂಡಾ ಈ ರೀತಿಯ ಹಲ್ಲೆ ಮಾಡಬಾರದು. ಈ ಪ್ರಕರಣವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ. ತಪಿತಸ್ಥ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆ ಕುರಿತು ಶೀಘ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.