ಬೆಂಗಳೂರು: ನವೆಂಬರ್ 18 ರಿಂದ 20 ರವರೆಗೆ ನಗರದಲ್ಲಿ ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್) ನಡೆಯಲಿದ್ದು, ಈ ಶೃಂಗಸಭೆಯು ಜಾಗತಿಕ ನಾವೀನ್ಯತೆಯನ್ನು ಪ್ರದರ್ಶಿಸಲಿದೆ ಎಂದು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಹೇಳಿದರು.
ಶೃಂಗಸಭೆ ಸಂಬಂಧ ಸಚಿವರು ಗುರುವಾರ ಆಯೋಜನಾ ತಂಡ ಮತ್ತು ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಈ ವರ್ಷದ ಶೃಂಗಸಭೆಯು ಮಹತ್ವಾಕಾಂಕ್ಷೆಯ ಆವೃತ್ತಿಯಾಗಿ ರೂಪುಗೊಳ್ಳುತ್ತಿದೆ. ಜಾಗತಿಕ ಭಾಷಣಕಾರರು, ಉದ್ಯಮಿಗಳು ಮತ್ತು ಪ್ರಮುಖ ಬಂಡವಾಳಶಾಹಿಗಳು ತಂತ್ರಜ್ಞಾನ, ನೀತಿ ಮತ್ತು ನಾವೀನ್ಯತೆ ಕುರಿತು ಮಾತುಕತೆ ನಡೆಸಲಿದ್ದಾರೆ.
ಪ್ರತಿಯೊಂದು ಅಂಶವನ್ನೂ ವಿನ್ಯಾಸಗೊಳಿಸಲಾಗಿದೆ. ನೀತಿ ಮತ್ತು ಮೆಗಾ ಯೋಜನೆಗಳ ಕುರಿತು ಪ್ರಮುಖ ಘೋಷಣೆಗಳ ಜೊತೆಗೆ ಫ್ಯೂಚರ್ ಮೇಕರ್ಸ್ ಕಾನ್ಕ್ಲೇವ್ ಅಡಿಯಲ್ಲಿ ಉದ್ಯಮಿಗಳು ಮತ್ತು ಭವಿಷ್ಯದ ಪ್ರವರ್ತಕರ ಅತಿದೊಡ್ಡ ಸಭೆಯನ್ನೂ ಕೂಡ ಆಯೋಜಿಸುತ್ತಿದ್ದೇವೆ. ಈ ಬಾರಿಯ ಟೆಕ್ ಶೃಂಗಸಭೆ ಹೊಸತನಕ್ಕೆ ಸಾಕ್ಷಿಯಾಗಲಿದೆ ಹೇಳಿದರು.
ಏತನ್ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಯಮದ ಮುಖಂಡರು, ಸಂಶೋಧಕರು, ಉದ್ಯಮಿಗಳು ಮತ್ತು ಹೂಡಿಕೆದಾರರು ಬಿಟಿಎಸ್ 2025 ಜೊತೆಗೆ ಕೈಜೋಡಿಸುವಂತೆ ಕರೆ ನೀಡಿದರು.
'Futurise' ಎಂಬ ವಿಷಯದ ಮೇಲಿನ ಈ ಶೃಂಗಸಭೆಯು 60 ಕ್ಕೂ ಹೆಚ್ಚು ದೇಶಗಳಿಂದ 1 ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು, 600 ಕ್ಕೂ ಹೆಚ್ಚು ಭಾಷಣಕಾರರು ಮತ್ತು ನಾವೀನ್ಯಕಾರರನ್ನು ಒಟ್ಟುಗೂಡಿಸುತ್ತದೆ ಎಂದು ಹೇಳಿದರು.
ಬೆಂಗಳೂರು ಭಾರತದ ನಾವೀನ್ಯತೆ ಪ್ರಯಾಣದ ಕೇಂದ್ರವಾಗಿದೆ, ಇದು ಆಲೋಚನೆಗಳು, ಪ್ರತಿಭೆ ಮತ್ತು ತಂತ್ರಜ್ಞಾನದೊಂದಿಗೆ ಮುನ್ನಡೆಸುತ್ತಿದೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಕರ್ನಾಟಕವು ಭಾರತದ ಡಿಜಿಟಲ್ ರೂಪಾಂತರವನ್ನು ಮುನ್ನಡೆಸುತ್ತಲೇ ಇದ್ದು, ಬಿಟಿಎಸ್ 2025 (ಬೆಂಗಳೂರು ಟೆಕ್ ಶೃಂಗಸಭೆ 2025) ರಲ್ಲಿ ನಮ್ಮೊಂದಿಗೆ ಸೇರಲು ಮತ್ತು ಬೆಂಗಳೂರಿನ ಅತಿದೊಡ್ಡ ನಾವೀನ್ಯತೆಯ ಭಾಗವಾಗಲು ಎಲ್ಲರನ್ನೂ ಆಹ್ವಾನಿಸುತ್ತೇನೆಂದು ಹೇಳಿದ್ದಾರೆ.