ಬೆಂಗಳೂರು: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ಮಗನ ತಲೆಗೆ ಗುಂಡು ಹಾರಿಸಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿಯಲ್ಲಿ ನಡೆದಿದೆ.
ಗುಂಡೇಟಿನಿಂದ ಗಾಯಗೊಂಡಿರುವ ವ್ಯಕ್ತಿಯನ್ನು ಹರೀಶ್ (28) ಎಂದು ಗುರ್ತಿಸಲಾಗಿದೆ. ಗುಂಡು ಹಾರಿಸಿದ ತಂದೆಯನ್ನು ಸುರೇಶ್ (49) ಎಂದು ಗುರ್ತಿಸಲಾಗಿದೆ.
ಮಧ್ಯದ ಅಮಲಿನಲ್ಲಿ ಮಗನೊಂದಿಗೆ ಸುರೇಶ್ ವಾಗ್ವಾದ ನಡೆಸಿದ್ದು, ಜಗಳ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಈ ವೇಳೆ ನಾಡ ಬಂದೂಕಿನಿಂದ ಮಗನ ತಲೆಗೆ ಗುಂಡು ಹಾರಿಸಿದ್ದಾನೆ.
ಆಸ್ತಿ ಮಾರಾಟ ಮಾಡಿ, ಬಂದ ಹಣವನ್ನು ಮದ್ಯಕ್ಕೆ ಖರ್ಚು ಮಾಡಿದ್ದಕ್ಕೆ ಹರೀಶ್ ಅವರು ತಮ್ಮ ತಂದೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದ್ದು, ಸುರೇಶ್ ಮಗ ಹರೀಶ್ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡು ಹರೀಶ್ ತಲೆಯ ಬಲಭಾಗಕ್ಕೆ ತಗುಲಿ ತೀವ್ರ ರಕ್ತಸ್ರಾವ ಉಂಟಾಗಿದೆ. ಶಬ್ಧ ಕೇಳಿ ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಹರೀಶ್‌ನ್ನು ತಕ್ಷಣ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಗಾಯದ ತೀವ್ರತೆಯನ್ನು ಗಮನಿಸಿ ಹರೀಶ್‌ನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಕೋಳಿ ಸಾಕಣೆ ಕೇಂದ್ರ ಹೊಂದಿರುವ ಸುರೇಶ್ ಅವರ ಬಳಿ 1986 ರಲ್ಲಿ ನೀಡಲಾದ ಪರವಾನಗಿ ಪಡೆದ ಬಂದೂಕು ಇತ್ತು. ಆರೋಪಿಯನ್ನು ಬಂಧಿಸಲಾಗಿದ್ದು, ಘಟನೆ ಸಮಯದಲ್ಲಿ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.