ಮಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಸಮಾಜ ಸೇವೆ ಶ್ಲಾಘನೀಯವಾದದ್ದು, ಅವರ ಸೇವೆಗೆ ಸರಿಸಾಟಿಯಿಲ್ಲ ಎಂದು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು ಶುಕ್ರವಾರ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಧರ್ಮಸ್ಥಳವು ಕೋಮು ಸೌಹಾರ್ದತೆಗೆ ಹೆಸರುವಾಸಿಯಾದ ಪವಿತ್ರ ಸ್ಥಳವಾಗಿದೆ. ಅವರ ಅಜ್ಜ ದಿವಂಗತ ಮಂಜಯ್ಯ ಹೆಗ್ಗಡೆ ಅವರ ಕನಸಂತೆ ಮತ್ತು ಅವರ ತಂದೆ ರತ್ನವರ್ಮ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ವೀರೇಂದ್ರ ಹೆಗಡೆ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆಂದು ಹೇಳಿದರು.
ಗ್ರಾಮಾಭಿವೃದ್ಧಿ ಕಾರ್ಯಕ್ರಮದ ಮೂಲಕ, ಹೆಗಡೆ ಅವರು ಮಹಾತ್ಮ ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆಯನ್ನು ನನಸಾಗಿಸಿದ್ದಾರೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಹ ಅವರು ಕಾರ್ಯಗತಗೊಳಿಸಿದ್ದಾರೆ. ಇದರ ಜೊತೆಗೆ, ಧರ್ಮಸ್ಥಳದಲ್ಲಿ ಹಳೆಯ ದೇವಾಲಯಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಲು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗಡೆಯವರು ಹೊಸ ಯೋಜನೆಗಳನ್ನು ಘೋಷಿಸಿದರು. ಧರ್ಮಸ್ಥಳದ ಅಶೋಕನಗರದಲ್ಲಿ ರೂ.2 ಕೋಟಿ 41 ಲಕ್ಷ ರಾಜ್ಯಸಭಾ ಸದಸ್ಯರ ಅನುದಾನದಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣ, ಬೀದಿದೀಪಗಳ ಅಳವಡಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ 300 ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಪೂರೈಸಿದ್ದು, ಮುಂದಿನ ವರ್ಷ 13 ದೇವಾಲಯಗಳನ್ನು ಜೀರ್ಣೋದ್ಧಾರಕ್ಕಾಗಿ ಗುರುತಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 25,500 ಕೋಟಿ ರೂ. ಬಿ.ಸಿ. ಟ್ರಸ್ಟ್ ಮೂಲಕ ವಿತರಿಸಲಾಗಿದೆ.
2026ರ ಮಾರ್ಚ್ ಒಳಗೆ 1 ಸಾವಿರ ಕೆರೆಗಳಿಗೆ ಕಾಯಕಲ್ಪ ನೀಡಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಬೆಳ್ತಂಗಡಿಯಲ್ಲಿ 7 ಎಕ್ರೆ ಜಾಗದಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉಪಸ್ಥಿತರಿದ್ದರು.