ಮೈಸೂರು: ಗ್ಯಾಸ್ ಗೀಸರ್ ನಿಂದ ಎಲ್ ಪಿಜಿ ಸೋರಿಕೆಯಾಗಿ ಇಬ್ಬರು ಸಹೋದರಿಯರು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಗುಲ್ಫಾಮ್ (23) ಮತ್ತು ಆಕೆಯ ಸಹೋದರಿ ಸಿಮ್ರಾನ್ ತಾಜ್ (20) ಎಲ್ ಪಿಜಿ ಅನಿಲ ಸೇವಿಸಿ ಸ್ನಾನಗೃಹದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿರಿಯಾಪಟ್ಟಣದ ಜೋನಿಗೇರಿ ಬೀದಿಯಲ್ಲಿ ಅಲ್ತಾಫ್ ಪಾಷಾ ಮತ್ತು ಅವರ ಕುಟುಂದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಗುರುವಾರ ರಾತ್ರಿ ಸುಮಾರು 7ರ ಸಮಯದಲ್ಲಿ ಸಹೋದರಿಯರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದಾರೆ.
ಈ ವೇಳೆ ಸ್ನಾನದ ಕೋಣೆಯಲ್ಲಿ ಗ್ಯಾಸ್ ಗೀಸರ್ ಆನ್ ಮಾಡಿದ ತಕ್ಷಣ ಅದರಿಂದ ಬಿಡುಗಡೆಯಾದ ವಿಷಾನಿಲ ಸೇವನೆಯಿಂದ ಉಸಿರಾಡಲು ತೊಂದರೆ ಉಂಟಾಗಿ ತಕ್ಷಣ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಕೆಲ ಹೊತ್ತಾದರೂ ಸ್ನಾನದ ಕೋಣೆಯಿಂದ ಹೊರಗೆ ಬರದಿದ್ದಾಗ, ಕುಟುಂಬಸ್ಥರು ತೆರಳಿ ನೋಡಿದಾಗ ಇಬ್ಬರೂ ಕುಸಿದು ಬಿದ್ದಿದ್ದರು.
ತಕ್ಷಣ ಇಬ್ಬರು ಸಹೋದರಿಯರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಪಿರಿಯಾಪಟ್ಟಣದ ಶವಾಗಾರದಲ್ಲಿ ಇಬ್ಬರೂ ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಬೆಟ್ಟದಪುರದ ಗ್ರಾಮದಲ್ಲಿ ಶುಕ್ರವಾರ ಸಂಜೆ ವೇಳೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಬನ್ ಮೋನಾಕ್ಸೆಡ್ ಸೇವನೆಯಿಂದ ಯುವತಿಯರು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶವ ಪರೀಕ್ಷೆ ನಡೆಸಿ, ವರದಿಗೆ ಕಳುಹಿಸಲಾಗಿದೆ. ಗ್ಯಾಸ್ ಗೀಸರ್ ಬಳಸುವಾಗ ಜನರು ಎಚ್ಚರಿಕೆಯಿಂದ ಬಳಕೆ ಮಾಡಬೇಕು. ವೆಂಟಿಲೇಟರ್ ಇರುವ ಕಡೆ ಗ್ಯಾಸ್ ಗೀಸರ್ ಬಳಕೆ ಮಾಡಬೇಕು" ಎಂದು ಸಲಹೆ ನೀಡಿದ್ದಾರೆ.