ಬೆಂಗಳೂರು: ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಮ್ಮ ಸ್ಥಾನಗಳನ್ನು ಮರೆತು ಬೀದಿಯಲ್ಲಿ ನಿಂತು ಪರಸ್ಪರ ಏಕವಚನದಲ್ಲೇ ಬೈದಾಡಿಕೊಳ್ಳುತ್ತಿದ್ದಾರೆ. ಇವರ ಕಿತ್ತಾಟ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಜನರು ಇಬ್ಬರ ವರ್ತನೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿನ್ನೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಮುಳ್ಳಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಪ್ರದೀಪ್ ಈಶ್ವರ್. ನಮ್ಮ ತಂದೆ ವಯಸ್ಸಿನಲ್ಲಿ ಇದ್ದಾಗ ಚಿಕ್ಕಬಳ್ಳಾಪುರ ಕಡೆ ಬಂದಿದ್ರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಬೇಕು ಮಗನೆ ಎಂದು ಏಕವಚನದಲ್ಲೇ ಕಿಡಿ ಕಾರಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಪ್ರದೀಪ್ ಈಶ್ವರ್, ಏನ್ ಪ್ರತಾಪ್ ಸಿಂಹ ಇನ್ನೊಂದ್ ಸಲ ರಿವೈಂಡ್ ಮಾಡ್ಕೊಂಡು ನೋಡು ಮಗನೇ.. ಬೆಳಗ್ಗೆ ಕೂದಲೆಲ್ಲಾ ಬಾಚದೇ ಪ್ರೆಸ್ ಮೀಟ್ ಗೆ ಬರ್ತೀಯಲ್ಲ.. ಅವಾಗ ನಿನ್ನನ್ನ ನೀನ್ ನೋಡ್ಕೋ.. ಮುಳ್ಳು ಹಂದಿ ನೀನಾ ನಾನಾ ಎಂದು ಗೊತ್ತಾಗುತ್ತೆ ಎಂದು ಲೇವಡಿ ಮಾಡಿದ್ದರು.
ಇದೀಗ ಇವರಿಬ್ಬರ ಕಿತ್ತಾಟಕ್ಕೆ ಬ್ರೇಕ್ ಹಾಕಲು ಗುರುಗಳಾದ ವಿಶ್ವೇಶ್ವರ ಭಟ್ಟರು ಮುಂದಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ. ಒಮ್ಮೆ ಸಮಾಧಾನದಿಂದ ನೀವು ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿ. ಈ ಕಿತ್ತಾಟವನ್ನು ಇಲ್ಲಿಗೆ ನಿಲ್ಲಿಸಿ, ಸಾಕು, ಸಾಕು ಎಂದು ಸಲಹೆ ನೀಡಿದ್ದಾರೆ.
ಈ ಹಿಂದೆ ಪತ್ರಕರ್ತರಾಗಿದ್ದ ಪ್ರತಾಪ ಸಿಂಹ ಮತ್ತು ಶಿಕ್ಷಣ ಅಕಾಡೆಮಿ ನಡೆಸುತ್ತಿದ್ದ ಪ್ರದೀಪ್ ಅವರು ರಾಜಕೀಯ ಅಖಾಡಕ್ಕೆ ಇಳಿದ ಹೊಸಬರು. ಯಾವುದೇ ಶ್ರೀಮಂತಿಕೆಯ ಹಿನ್ನೆಲೆಯಿಲ್ಲದೆ, ಸ್ವಜನಪಕ್ಷಪಾತದ ನೆರಳಿಲ್ಲದೆ, ಇಬ್ಬರೂ ಸ್ವಂತ ಪರಿಶ್ರಮದಿಂದಲೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದರು. ಒಂದು ಕಾಲದಲ್ಲಿ ಅವರಿಬ್ಬರಿಗೂ ವಿಶ್ವೇಶ್ವರ ಭಟ್ ಅವರು ಗುರುಗಳಾಗಿದ್ದರು.