ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ದೊಡ್ಡ ನಗರವಾಗಿದ್ದರೂ, ಕಸದ ಸಮಸ್ಯೆ ಮಾತ್ರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನರು ಎಲ್ಲೆಂದರಲ್ಲಿ ರಸ್ತೆ ಬದಿ ಕಸ ಹಾಕುತ್ತಿದ್ದು. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಕಸದ ಗಾಡಿಗಳು ಸರಿಯಾಗಿ ಬರುವುದಿಲ್ಲ ಎಂದು ಹೇಳುತ್ತಾರೆ. ಇದೀಗ ಇದಕ್ಕೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.
ಬ್ರ್ಯಾಂಡ್ ಬೆಂಗಳೂರು ಎಂಬ ಇಮೇಜ್‌ಗೆ ಹಾನಿ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಹಲವಾರು ಆಯ್ಕೆಗಳನ್ನು ಅನ್ವೇಷಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಬೀದಿ ಬದಿ ಕಸ ಎಸೆಯುವವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.
ಇದರಂತೆ ಜನರು ಅಪ್ಪಿ ತಪ್ಪಿ ರಸ್ತೆ ಬದಿಯಲ್ಲಿ ಕಸ ಹಾಕಿದರೆ ಮನೆ ಹುಡುಕಿ ಬರುವ ಅಧಿಕಾರಿಗಳು, ತ್ಯಾಜ್ಯವನ್ನು ಅವರ ನಿಮ್ಮ ಮನೆ ಬಾಗಿಲಿಗೇ ಸುರಿದು, ಭಾರೀ ದಂಡ ವಿಧಿಸಲು ನಿರ್ಧರಿಸಿದ್ದಾರೆ.
ಮೊದಲು ಮಾರ್ಷಲ್‌ಗಳು ಕಸ ಎಸೆಯುವವರ ಫೋಟೋ ಹಾಗೂ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಾರೆ. ನಂತರ ಅವರ ನಿವಾಸಗಳನ್ನು ಪತ್ತೆ ಮಾಡಿ, ಅವರ ಮನೆ ಬಾಗಿಲಿಗೇ ಕಸ ಸುರಿಯುವ ಕೆಲಸ ಮಾಡುತ್ತಾರೆ.
ಈಗಾಗಲೇ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್) ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಬ್ಲ್ಯಾಕ್ ಸ್ಪಾಟ್ ಗಳನ್ನು ಕಡಿಮೆ ಮಾಡಲು ಬೀದಿ ಬದಿ ಕಸ ಎಸೆಯುವವರಿಗೆ ದಂಡ ವಿಧಿಸುತ್ತಿದೆ. ಆದರೂ, ಸಮಸ್ಯೆ ಮಾತ್ರ ದೂರಾಗುತ್ತಿಲ್ಲ. ಹೀಗಾಗಿ, ರಸ್ತೆಯಲ್ಲಿ ಕಸ ಎಸೆಯುವವರ ಮನೆ ಬಾಗಿಲಿಗೇ ತ್ಯಾಜ್ಯ ಎಸೆದು ಪಾಠ ಕಲಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರು ಕಸ ಎಸೆಯುವ ಫೋಟೋ ಹಾಗೂ ವಿಡಿಯೋವನ್ನು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುವುದು. ಈಗಾಗಲೇ ಈ ಕಸ ಎಸೆಯುತ್ತಿರುವವರ ವಿಡಿಯೋಗಳನ್ನ ರೆಕಾರ್ಡ್ ಮಾಡುವ ಕೆಲಸ ಮಾಡಲಾಗುತ್ತಿದೆ. ಮಾರ್ಷಲ್‌ಗಳು, ವಾರ್ಡ್ ಎಂಜಿನಿಯರ್‌ಗಳು ಮತ್ತು ನ್ಯಾಯವ್ಯಾಪ್ತಿಯ ಪೊಲೀಸರು ಕೂಡ ಕಸ ಎಸೆದವರ ಮನೆಗಳಿಗೆ ತಲುಪಿ, ಅವರ ಮನೆ ಬಾಗಿಲಿಗೆ ಕಸವನ್ನು ಸುರಿಯುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BSWML ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀ ಗೌಡ ಅವರು ಮಾತನಾಡಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್) ತನ್ನ ಪರಿಶ್ರಮದ ಮೂಲಕ ನಗರದಲ್ಲಿದ್ದ 869 ಬ್ಲ್ಯಾಕ್ ಸ್ಪಾಟ್ ಗಳನ್ನು 150ಕ್ಕೆ ಇಳಿಸಿದೆ. ನಗರವನ್ನು ಸ್ವಚ್ಛವಾಗಿಡಲು ಮತ್ತು ಕಸ ಎಸೆಯುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರಿಂದ ಕಟ್ಟುನಿಟ್ಟಿನ ಸೂಚನೆಗಳಿವೆ. ಹೀಗಾಗಿ, ಕಸ ಎಸೆದವರ ಮನೆ ಬಾಗಿಲಿಗೇ ಕಸ ಎಸೆಯುವ ಹಾಗೂ ನಿಯಮ ಉಲ್ಲಂಘಿಸಿದವರಿಗೆ 2,000 ರಿಂದ 10,000 ರೂಗಳ ವರೆಗೆ ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.