ಧಾರವಾಡ; ಪ್ರಸಕ್ತ ಸಾಲಿನ ವಿಧಾನಮಂಡಲ ಚಳಿಗಾಲ ಅಧಿವೇಶನ ಡಿ.8 ರಿಂದ ಬೆಳಗಾವಿಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ಸಂಬಂಧ ಮುಂದಿನ ವಾರ ಬೆಳಗಾವಿ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಚಳಿಗಾಲದ ಅಧಿವೇಶನದ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಅವರು ವೇಳಾಪಟ್ಟಿಯನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಉತ್ತರ ಕರ್ನಾಟಕದ ಕೆಲವು ಚುನಾಯಿತ ಪ್ರತಿನಿಧಿಗಳು ಈ ಪ್ರದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಉತ್ತರ ಕರ್ನಾಟಕದ ಕುರಿತು ಚರ್ಚೆ ನಡೆಸಲು ಎರಡು ದಿನಗಳನ್ನು (ಬುಧವಾರ ಮತ್ತು ಗುರುವಾರ) ಮೀಸಲಿಡಲಾಗುವುದು ಎಂದು ಹೇಳಿದರು.
ದಕ್ಷಿಣ ಕರ್ನಾಟಕದ ಚುನಾಯಿತ ಪ್ರತಿನಿಧಿಗಳು ತಮ್ಮ ಪ್ರದೇಶದ ಸಮಸ್ಯೆಗಳನ್ನು ಸಕ್ರಿಯವಾಗಿ ಚರ್ಚಿಸುತ್ತಿದ್ದರೂ, ಉತ್ತರ ಕರ್ನಾಟಕದವರು ಸಾಕಷ್ಟು ಆಸಕ್ತಿ ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಕೆಲವು ನಾಯಕರು "ನವೆಂಬರ್ ಕ್ರಾಂತಿ" ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ವಿಚಾರ ಬಗ್ಗೆ ಚರ್ಚಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಚುನಾವಣೆಯಲ್ಲಿ ಹಣದ ಪ್ರಭಾವದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ ಎಂದು ಹೇಳಿದರು.
ಜನರು ಹಣ ಪಡೆದು ಮತದಾನ ಮಾಡುವುದನ್ನು ನಿಲ್ಲಿಸಬೇಕು. ಆದರೆ ಅದು ಕಷ್ಟಕರವಾದ ಕೆಲಸವೆಂದು ತೋರುತ್ತದೆ. ಇದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ನೈತಿಕತೆಯಿರುವ ಜನರು ಸುಲಭವಾಗಿ ಸೋಲುತ್ತಾರೆಂದು ಹೇಳಿದರು.