ಬೆಂಗಳೂರು: 'ಯಶಸ್ವಿನಿ ಟ್ರಸ್ಟ್'ಗೆ ಟ್ರಸ್ಟಿಯಾಗಿ ತಿಪಟೂರಿನ ವೈದ್ಯ ಶ್ರೀಧರ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಶ್ರೀಧರ್ ರಾಷ್ಟ್ರೀಯ ಸ್ವಯಂಸೇವಾ ಸಂಘ (RSS)ದ ಕಾರ್ಯಕರ್ತರಾಗಿದ್ದು ಅವರನ್ನು ಹೇಗೆ ನೇಮಕ ಮಾಡಿದ್ದೀರಾ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ RSS ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿ ಭಾಗಿಯಾಗಿದ್ದ ತಿಪಟೂರಿನ ವೈದ್ಯ ಶ್ರೀಧರ್ ಹೆಸರನ್ನು ಯಶಸ್ವಿನಿ ಟ್ರಸ್ಟ್‌ನಿಂದ ತೆಗೆದುಹಾಕಲಾಗಿದೆ.
ಶ್ರೀಧರ್ ನೇಮಕ ಕಾಂಗ್ರೆಸ್ ಪಕ್ಷದ ಕೋಮುವಾದಿ ವಿರೋಧಿ ಮತ್ತು ಸಾಮರಸ್ಯ ನೀತಿಗೆ ವಿರುದ್ಧವಾಗಿದ್ದು ಅವರನ್ನು ತಕ್ಷಣವೇ ಟ್ರಸ್ಟಿ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ ಶಶಿಧರ್ ಒತ್ತಾಯಿಸಿದ್ದರು. ತೀವ್ರ ವಿರೋಧಗಳ ಬೆನ್ನಲ್ಲೇ ಶ್ರೀಧರ್ ಅವರ ಹೆಸರನ್ನು ಟ್ರಸ್ಟಿ ಸ್ಥಾನದಿಂದ ಕೈಬಿಡಲಾಗಿದೆ. ಈ ಸಂಬಂಧ ಸರ್ಕಾರ ಆದೇಶವನ್ನು ಹೊರಡಿಸಿದೆ.
RSS ಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಕ್ಟೋಬರ್ 12ರಂದು ತುಮಕೂರಿನ ತಿಪಟೂರಿನಲ್ಲಿ ಪಥಸಂಚಲನ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಶ್ರೀಧರ್ ಅವರು ಗಣವೇಶ ಧರಿಸಿ ಪಥಸಂಚಲನದಲ್ಲಿ ಭಾಗಿಯಾಗಿದ್ದರು. ಇನ್ನು ಸರ್ಕಾರದ 'ಯಶಸ್ವಿನಿ ಟ್ರಸ್ಟ್‌ಗೆ ಟ್ರಸ್ಟಿಯಾಗಿ ನೇಮಿಸುವಂತೆ ಕಾಂಗ್ರೆಸ್ ಶಾಸಕ ಪಡಕ್ಷರಿ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಸರ್ಕಾರವು ಡಾ. ಶ್ರೀಧರ್ ಅವರನ್ನು ಟ್ರಸ್ಟಿಯಾಗಿ ನೇಮಿಸಿತ್ತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಿಪಟೂರಿನಲ್ಲಿ ಶಾಸಕ ಕೆ. ಷಡಾಕ್ಷರಿ ಅವರು, ಈ ಘಟನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಜುಗರವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾವು RSS ಅನ್ನು ಬೆಂಬಲಿಸುವುದಿಲ್ಲ. ನನಗೆ RSS ಸಂಪರ್ಕನೂ ಇಲ್ಲ ಎಂದು ಹೇಳಿದ್ದಾರೆ.